ಕರಾವಳಿ

ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಗೆಲುವು ನಿಶ್ಚಿತ: ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು

Pinterest LinkedIn Tumblr

ಬೈಂದೂರು: ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದಿಂದ ಸಣ್ಣ ಸಣ್ಣ ಸಮುದಾಯಗಳು ಮತ್ತು ವಿವಿಧ ವೃತ್ತಿ ಬಾಂಧವರ ಸಮಾವೇಶ ನಡೆಸಲಾಗುವುದು. ಆ ಮೂಲಕ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮೀಸಲಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾಗಳ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು ತಿಳಿಸಿದರು.

ಬೈಂದೂರಿನ ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲ್ ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ಬೈಂದೂರು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ‌‌ ಮೋರ್ಚಾದ ಪದಗ್ರಹಣ ಕಾರ್ಯಕ್ರಮವಾಗಿದೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎನ್ನುವ ಹಿನ್ನೆಲೆಯಲ್ಲಿ ವಿವಿಧ ಮೋರ್ಚಾಗಳ ಚಟುವಟಿಕೆ ನಡೆಯುತ್ತಿದೆ. ಹಿಂದುಳಿದ ವರ್ಗದವರನ್ನೇ ಸಂಘಟಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಾಡಲಾಗುತ್ತಿದೆ. ಬೈಂದೂರು ಮಂಡಲದಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸುವ ದೃಷ್ಟಿಯಿಂದ ಹಿಂದುಳಿದ ವರ್ಗದಲ್ಲಿ ಬರುವ ಸಣ್ಣ ಸಣ್ಣ ಜಾತಿಗಳ ಸಮಾವೇಶ ಮಾಡುವುದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಮತ್ತು ಯೋಚನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದೇವೆ ಎಂದರು.

ಮನವೊಲಿಸುವ ಪ್ರಯತ್ನ ನಡೆಯಲಿದೆ:
ಕೆ.ಎಸ್. ಈಶ್ವರಪ್ಪನವರು ಒಂದು ಹಂತದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ವ್ಯಕ್ತಿ. ಈಗ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಹೀಗೆ ಮಾಡಿರಬಹುದು. ಪಕ್ಷದ ಹಿರಿಯರು ಅದನ್ನು ಸರಿಪಡಿಸುವ ವಿಶ್ವಾಸ ನಮಗಿದೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಇಚ್ಚೆ ಎಲ್ಲರಲ್ಲೂ ಇರುವುದರಿಂದ ಬೇರೆ ಯಾವುದೇ ಚಟುವಟಕೆಯೂ ಈ ಚುನಾವಣೆಯಲ್ಲಿ ಮುಖ್ಯವಾಗಲಾರದು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಲಾಗುತ್ತದೆ ಎಂದರು.
ಹಿಂದುತ್ವ ಬಿಟ್ಟು ಬಿಜೆಪಿಯಿಲ್ಲ. ಬಿಜೆಪಿ‌ ಸದಾ ದೇಶದ ಬಹುಸಂಖ್ಯಾತರ ಪರವಾಗಿಯೇ ಇರಲಿದೆ. ಅಭಿವೃದ್ಧಿಯ ಜತೆಗೆ ಹಿಂದುತ್ವ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಬಿಜೆಪಿಯಿಂದ ಜಯಪ್ರಕಾಶ್ ಹೆಗ್ಡೆಯವರಿಗೆ ಯಾವುದೇ ಅನ್ಯಾಯವಾಗಿಲ್ಲ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನಂತರದಲ್ಲಿ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವಧಿ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯ ಟಿಕೆಟ್ ಆಫರ್ ಮಾಡುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಉಳಿದದ್ದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ
ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಿದೆ. ಅವರು ಸಚಿವರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿಯೂ ಉತ್ತಮ ಕಾರ್ಯ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ, ಸರಳ ವ್ಯಕ್ತಿತ್ವದ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡಿದೆ ಅವರು ಜಯ ಸಾಧಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗ ಮೋರ್ಚಾದ ರವೀಂದ್ರ ತಿಂಗಳಾಯ ಕುಂದಾಪುರ, ಶಿವರಾಜ್ ಪೂಜಾರಿ ಗೋಳಿಹೊಳೆ, ಭಾರತಿ ಚಂದ್ರಶೇಖರ್, ಶಾಂತಿ ಖಾರ್ವಿ, ಮಂಜುನಾಥ ದೇವಾಡಿಗ, ರಾಘವೇಂದ್ರ ಕೊಠಾರಿ, ವಿನೋದ್ ಗುಜ್ಜಾಡಿ, ರಾಜಶೇಖರ ಬೈಂದೂರು, ಶ್ರೀಗಣೇಶ್ ಗಾಣಿಗ ಉಪಸ್ಥಿತರಿದ್ದರು.

Comments are closed.