ಕರಾವಳಿ

ಅಡಿಕೆ ಕಳವು ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿದ ಶಂಕರನಾರಾಯಣ ಪೊಲೀಸರು

Pinterest LinkedIn Tumblr

ಉಡುಪಿ: ಹಲವು ಕಡೆಗಳಲ್ಲಿ ನಡೆದ ಅಡಿಕೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾಪುರ ಗುಲ್ವಾಡಿ ಗ್ರಾಮದ ಅಮೀರ್ ಝೈನುದ್ದೀನ್ (23), ಭಟ್ಕಳ ಬಿಳಲಖಂಡ ಗ್ರಾಮದ ಮುನಾವರ್(21), ಭಟ್ಕಳ ಉಸ್ಮಾನ್ ನಗರದ ನಿಸಾರ್ ಆಸೀಫ್ ಅನ್ನಾರ್(24) ಬಂಧಿತ ಆರೋಪಿಗಳು. ಇವರು ಶಂಕರನಾರಾಯಣ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿ ಎಂಬಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.

ಬಂಧಿತರಿಂದ 11.25 ಕ್ವಿಂಟಾಲ್ ಸಿಪ್ಪೆಅಡಿಕೆ, 40ಕೆ.ಜಿ. ಒಣ ಅಡಿಕೆ, ಮತ್ತು ಕೃತ್ಯಕ್ಕೆ ಬಳಸಿದ್ದ ಪಿಕ್‌ಆಪ್ ವಾಹನ ಹಾಗೂ ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4,05,750ರೂ. ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಕುಂದಾಪುರ ವೃತ್ತದ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ಎಸ್ಸೈಗಳಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಂ.ಇ., ಸಿಬ್ಬಂದಿ ಪುನೀತ್ ಕುಮಾರ್, ಸಚಿನ್, ಲೋಹಿತ್ ಕುಮಾರ್, ಮೌನೇಶ್, ರಾಕೇಶ್, ಪ್ರಕಾಶ್, ರಾಘವೇಂದ್ರ, ಮಂಜುನಾಥ ಮೊದಲಾದವರಿದ್ದರು.

 

Comments are closed.