ಕರ್ನಾಟಕ

ʼಬಾ ನಲ್ಲೆ ಮಧುಚಂದ್ರಕೆʼ ಖ್ಯಾತಿಯ ನಟ ಕೆ.ಶಿವರಾಮ್‌ ವಿಧಿವಶ

Pinterest LinkedIn Tumblr

ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ಕನ್ನಡ ಚಿತ್ರ ನಟರಾಗಿಯೂ ಇದ್ದ ಕೆ.ಶಿವರಾಂ ಅವರು ಗುರುವಾರ ಮೃತಪಟ್ಟಿದ್ದಾರೆ. ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು, ಐಎಎಸ್‌ ಅಧಿಕಾರಿಯಾಗಿದ್ದ ಶಿವರಾಂ, ಕಳೆದೊಂದು ದಶಕದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದ್ದ ಶಿವರಾಂ, 1985ರಲ್ಲಿ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ, ಕನ್ನಡದಲ್ಲಿಯೇ ಐಎಎಸ್‌ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

1993ರಲ್ಲಿ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಂ ಅವರು, ನಾಗತಿಹಳ್ಳಿ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳಲ್ಲಿ ನಟಿಸಿದ್ದರು.

2013ರಲ್ಲಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ, ಸ್ವಯಂ ನಿವೃತ್ತಿ ಪಡೆದಿದ್ದ ಶಿವರಾಂ ರಾಜಕೀಯ ಜೀವನ ಆರಂಭಿಸಿದ್ದರು. ಕಾಂಗ್ರೆಸ್ ಸೇರಿದ್ದ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದು ನಂತರ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದರು.

Comments are closed.