ಕರಾವಳಿ

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Pinterest LinkedIn Tumblr

ಮಣಿಪಾಲ: ಶಿವಮೊಗ್ಗ ಜಿಲ್ಲೆಯ 44 ವರ್ಷದ  ಲಲಿತಮ್ಮ ಅವರಿಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಕೆ.ಎಂ.ಸಿ ವೈದ್ಯರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರೂ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಲಲಿತಮ್ಮ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.

ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಜೀವಸಾರ್ಥಕತೆ ಪ್ರೋಟೋಕಾಲ್ಗಳು ಮತ್ತು ನಿರ್ಧಾರಗಳ ಪ್ರಕಾರ, ದಾನ ಮಾಡಿದ ಶ್ವಾಸಕೋಶಗಳನ್ನು ಕಿಮ್ಸ್ ಆಸ್ಪತ್ರೆ ಹೈದರಾಬಾದ್ , ಯಕೃತ್ ಅನ್ನು ಸ್ಪರ್ಶ ಆಸ್ಪತ್ರೆ ಬೆಂಗಳೂರು ಮತ್ತು ಒಂದು ಮೂತ್ರಪಿಂಡ ಯುನಿಟಿ ಆಸ್ಪತ್ರೆ ಮಂಗಳೂರಿಗೆ ಕಳುಹಿಸಲಾಯಿತು. ಒಂದು ಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ‘ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿ ಅಂಗ ದಾನ ಮಾಡಲು ನಿರ್ಧರಿಸಿದ ಲಲಿತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.

 

Comments are closed.