ಉಡುಪಿ: ಉಡುಪಿ ನಗರದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.
ನಗರದ ರಾಜಾರಾಮ್ ಮೋಹನ್ ರಾಯ್ ರಸ್ತೆಯ ನಿವಾಸಿ ಎಪ್ಪತ್ತು ವರ್ಷದ ಗೀತಾ ಅವರು ಮುಂಜಾನೆ 5.30ಕ್ಕೆ ಶ್ರೀ ಕೃಷ್ಣ ಮಠಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವೃದ್ಧೆಯ ಮೂವರು ಪವನ್ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.
ಇದೇ ದುಷ್ಕರ್ಮಿಗಳಿಬ್ಬರು ಕರಾವಳಿ ಬೈಪಾಸ್ ಬಳಿಯಿಂದ ತನ್ನ ತಾಯಿ ಮನೆಗೆ ಕದಿರು ಕಟ್ಟುವುದಕ್ಕೆ ತೆರಳುತ್ತಿದ್ದ ಕುತ್ಪಾಡಿ ನಿವಾಸಿ ಮಮತಾ (38) ಅವರ ಕುತ್ತಿಗೆಯಲ್ಲಿದ್ದ ಮೂರು ಲಕ್ಷ ರೂ. ಮೌಲ್ಯದ ಕರಿಮಣಿ ಸರ ಕಸಿದು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಗಳಿಬ್ಬರು ಸುಮಾರು 35 ವರ್ಷದ ಆಸುಪಾಸಿನವರು ಎಂದು ಮಹಿಳೆಯರು ತಿಳಿಸಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕರಾವಳಿ ಬೈಪಾಸ್ ಬಳಿ ಪೊಲೀಸ್ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಚಹರೆ ದಾಖಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಈ ಎರಡರ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
Comments are closed.