ಕರಾವಳಿ

ಆರು ವರ್ಷದಲ್ಲೇ ದುಸ್ಥಿತಿ ತಲುಪಿದ ಗಂಗೊಳ್ಳಿ ಮೀನುಮಾರುಕಟ್ಟೆ: ಪ್ಯಾನ್ ತಿರುಗಲ್ಲ | ಸಮರ್ಪಕ ಬಾಗಿಲು ವ್ಯವಸ್ಥೆ ಸರಿಯಾಗಿಲ್ಲ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಆರು ವರ್ಷದ ಹಿಂದೆ ಸುಸಜ್ಜಿತ ಮೀನುಮಾರುಕಟ್ಟೆ ಹೆಸರಲ್ಲಿ ಉದ್ಘಾಟನೆಗೊಂಡ ಗಂಗೊಳ್ಳಿ ಮೀನು ಮಾರುಕಟ್ಟೆ ಇದೀಗ ಬಹಳಷ್ಟು ಜರ್ಝರಿತವಾಗಿದೆ. ಮೂಲಸೌಕರ್ಯ ಕೊರತೆಯಿಂದ ಮೀನು ಮಾರುವ ಮಹಿಳೆಯರು ಸಹಿತ ಗ್ರಾಹಕರು ಹೈರಾಣಾಗುತ್ತಿದ್ದಾರೆ.

ಗಂಗೊಳ್ಳಿ ತಾಲೂಕಿನ ಪ್ರಮುಖ ಬಂದರು ಕೇಂದ್ರ. ಮೀನುಗಾರಿಕೆ ಪ್ರದೇಶವೂ ಹೌದು. ಇಲ್ಲಿನ ಮೀನುಮಾರುಕಟ್ಟೆ ಕೂಡ ತಾಜಾ ಮೀನುಗಳಿಗೆ ಪ್ರಸಿದ್ಧಿ. ಹಲವು ವರ್ಷಗಳ ಇತಿಹಾಸವಿರುವ ಇಲ್ಲಿನ ಮೀನು‌ಮಾರುಕಟ್ಟೆಯನ್ನು 2017 ಮಾರ್ಚ್ ತಿಂಗಳಿನಲ್ಲಿ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೀನುಗಾರಿಕೆ ಇಲಾಖೆಯ ಅನುದಾನದಲ್ಲಿ ಮೀನು ಮಾರುಕಟ್ಟೆ ನಿರ್ಮಾಣವಾಗಿದ್ದು ಸುಮಾರು 40 ಮಹಿಳೆಯರು ಮೀನು ಮಾರಾಟದಲ್ಲಿ ಈ ಪೇಟೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಇಲ್ಲಿನ ಸಮಸ್ಯೆ ಕಾರಣಕ್ಕಾಗಿ ಸಂಜೆ ವ್ಯಾಪಾರದ ವೇಳೆ ಕಟ್ಟಡದ ಹೊರಗೆ ಕುಳಿತು ಮೀನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.

ಸಮಸ್ಯೆಗಳೇನು..?
ಹೊರಗಡೆಯಿಂದ ಸುಸಜ್ಜಿತವಾಗಿ ಕಾಣುವ ಮೀನುಮಾರುಕಟ್ಟೆಯೊಳಗೆ ಬಹಳಷ್ಟು ಸಮಸ್ಯೆಗಳು ಕಾಣಸಿಗುತ್ತದೆ. ಕಟ್ಟಡದ ಪ್ರಮು ದ್ವಾರಗಳು ಸರಿಯಾಗಿಲ್ಲ. ಮೀನು ಮಾರುವ ಮಹಿಳೆಯರು ಕೂರುವ ಖುರ್ಚಿಗಳು ಹಾಳಾಗಿದೆ. ಫ್ಯಾನುಗಳು ತಿರುಗದೇ ಅದೆಷ್ಟೋ ಸಮಯಗಳಾಗಿದ್ದು ಒಂದಷ್ಟು ಫ್ಯಾನಿನ ರೆಕ್ಕೆಗಳು ತುಕ್ಕು ಹಿಡಿದು ಮುರಿದಿದೆ. ಟ್ಯೂಬ್ ಲೈಟ್ ಕಳಚಿ ಬೀಳುವ ಸ್ಥಿತಿ ತಲುಪಿದೆ. ಚರಂಡಿ ಸಮಸ್ಯೆಯೂ ಕೂಡ ಕಾಡುತ್ತಿದೆ. ಕರಾರಿನ ಮೇಲೆ ಒಂದು ವರ್ಷದ ಅವಧಿಗೆ ಮೀನುಮಾರುಕಟ್ಟೆ ಸ್ವಚ್ಚತೆ ನೋಡಿಕೊಳ್ಳಲು ಖಾಸಗಿಯವರಿಗೆ ಟೆಂಡರ್ ನೀಡಲಾಗಿದೆ. ಇಲ್ಲಿನ ಕೆಲ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪಂಚಾಯತ್ ಸಹಕಾರ ನೀಡಬೇಕು. ನಾವು ಸ್ವಚ್ಚತೆ ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಎನ್ನುತ್ತಾರೆ ಟೆಂಡರ್ ಪಡೆದವರು.

ಕಳೆದ ಆರು ವರ್ಷಗಳ ಹಿಂದೆ ಈ ಮೀನುಮಾರುಕಟ್ಟೆ ಕಟ್ಟಡ ನಿರ್ಮಿಸಿದ್ದು ಸುಮಾರು 40 ಮಹಿಳೆಯರು ಇದನ್ನು ಆಶ್ರಯಿಸಿದ್ದೇವೆ. ಶಟರ್, ಬಾಗಿಲು, ಫ್ಯಾನ್ ಸಹಿತ ಒಂದಷ್ಟು ಸಮಸ್ಯೆಗಳಿದೆ. ಬೆಳಿಗ್ಗೆ ಮಾರುಕಟ್ಟೆ ಒಳಗೆ ಇರುತ್ತೇವೆ. ಸಂಜೆ ಸೊಳ್ಳೆ ಕಾಟ, ಗಾಳಿಯಿಲ್ಲದಿರುವ ಕಾರಣ ಹೊರಗಡೆ ಒಂದಷ್ಟು ಮಂದಿ ಕೂರುತ್ತಾರೆ. ಈ ಬಗ್ಗೆ ಸಂಬಂದಪಟ್ಟ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಶೀಘ್ರ ನಮ್ಮ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
– ಕಮಲಾ (ಗಂಗೊಳ್ಳಿ ಮೀನುಮಾರುಕಟ್ಟೆ ಅಧ್ಯಕ್ಷೆ)

ಗಂಗೊಳ್ಳಿ ಮೀನುಮಾರುಕಟ್ಟೆ ಸಮಸ್ಯೆ ಬಗ್ಗೆ ಮಾಹಿತಿಯಿದ್ದು ಇದರ ದುರಸ್ತಿಗೆ ಈ ವರ್ಷ ಹಣ ಕಾದಿರಿಸಿದ್ದೇವೆ. ಹೆಚ್ಚಿನ ಅನುದಾನ ಬಂದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲಾಗುತ್ತದೆ. ಅಗತ್ಯ ಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸ್ಚಚ್ಚತೆ ಬಗ್ಗೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಅಗತ್ಯ ಕ್ರಮವಹಿಸಲು ಸೂಚಿಸಲಾಗುವುದು.
– ಉಮಾಶಂಕರ್ (ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗಂಗೊಳ್ಳಿ ಗ್ರಾ.ಪಂ.)

Comments are closed.