ಕರಾವಳಿ

ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಾಲನೆ: ಜೀಪು, ಮೂರು ಕಾರು ಚಾಲಕರ ಮೇಲೆ ಪ್ರಕರಣ ದಾಖಲು..!

Pinterest LinkedIn Tumblr

ಉಡುಪಿ: ಮೂಡಬೆಟ್ಟು ಗ್ರಾಮದಿಂದ ಮೂಳೂರು ಗ್ರಾಮದವರೆಗೆ ರಾ.ಹೆ 66 ಉಡುಪಿ-ಮಂಗಳೂರು ರಸ್ತೆಯಲ್ಲಿ ನಾಲ್ಕು ಕಾರುಗಳನ್ನು ಅಡ್ಡಾದಿಡ್ಡಿ ಚಲಾಯಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆ ಕಾರು ಚಾಲಕರ ಮೇಲೆ ಸುಮೋಟೋದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಎ 20 ಎಂಡಿ 6767 ನೇ ನೀಲಿ ಬಣ್ಣದ ಮಹೀಂದ್ರಾ ಜೀಪಿನ ಚಾಲಕ, ಕೆಎ 20 ಎಂಎ 9370 ನೇ ಕಪ್ಪು ಬಣ್ಣದ ಕ್ರೇಟಾ ಕಾರಿನ ಚಾಲಕ, ಕೆಎ 20 ಎಂಇ 6996 ನೇ ಬಿಳಿ ಬಣ್ಣದ ಫಾರ್ಚುನರ್‌ ಕಾರಿನ ಚಾಲಕ ಹಾಗೂ ಕೆಎ 20 ಎಂಡಿ 8078 ನೇ ಬಿಳಿ ಬಣ್ಣದ ಸ್ವಿಫ್ಟ್ ಕಾರಿನ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ತಡರಾತ್ರಿಯೇ ಆರೋಪಿ ಕಾರು ಚಾಲಕರನ್ನು ಠಾಣೆಗೆ ಕರೆಸಿ ಮುಂದಿನ ಕಾನೂನು ಕ್ರಮವನ್ನು‌ ಪೊಲೀಸರು ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಕ್ರೆಟಾ ಕಾರು ಚಾಲಕ ಉದ್ಯಾವರ ಗುಡ್ಡೆಯಂಗಡಿ ನಿವಾಸಿ ಆಯಾನ್ (24), ಜೀಪು ಚಾಲಕ ಕುಂಜಿಬೆಟ್ಟು ನಿವಾಸಿ ಮಿಶ್ಲಾವುದ್ದಿನ್ (23), ಫಾರ್ಚ್ಯೂನರ್ ಕಾರಿನ ಚಾಲಕ ಉಡುಪಿ ನಿವಾಸಿ ಶಾನೋನ್ ಡಿಸೋಜಾ (25) ಮತ್ತು ಸ್ವಿಫ್ಟ್ ಕಾರು ಚಾಲಕ ಉಡುಪಿ ಕೊಡಂಕೂರು ನಿವಾಸಿ ವಿವೇಕ್ (23) ಎಂದು ಗುರುತಿಸಲಾಗಿದೆ.

ಘಟನೆ ಸಾರಾಂಶ:
ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ರಾ.ಹೆ 66 ರಸ್ತೆಯಲ್ಲಿ 1 ಜೀಪು ಹಾಗೂ 3 ಕಾರುಗಳ ಚಾಲಕರು ಅತೀ ವೇಗ ಮತ್ತು ತೀವ್ರ ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್‌ ಆಗುತ್ತಿದ್ದ ಬಗ್ಗೆ ಸ್ಥಳೀಯ ಠಾಣೆ ಪಿಎಸ್ಐ ಸುಮಾ ಅವರಿಗೆ ಬಂದ ಮಾಹಿತಿಯಂತೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿನ ಸ್ಥಳವು ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಿಂದ ಮೂಳೂರು ಗ್ರಾಮದವರೆಗಿನ ರಾ.ಹೆ 66 ಉಡುಪಿ- ಮಂಗಳೂರು ರಸ್ತೆಯಾಗಿದ್ದು ಕಂಡುಬಂದಿದ್ದು ವಿಡಿಯೋದಲ್ಲಿ ವಾಹನಗಳ ನಂಬ್ರಗಳನ್ನು ಪರಿಶೀಲಿಸಲಾಗಿ ವಾಹನಗಳು ಹಾಗೂ ಅವುಗಳ ಚಾಲಕರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಪು ಪೊಲೀಸ್ ಠಾಣೆ ಪಿಎಸ್ಐ ಸುಮ ಬಿ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

Comments are closed.