ಕರಾವಳಿ

ತುತ್ತು ಊಟಕ್ಕೂ ಪರದಾಡುತ್ತಿದ್ದ 85 ವರ್ಷದ ಮೊಂತಿನ್‌ ಡಿಸಿಲ್ವರಿಗೆ ಸಿಕ್ಕಿತು ನ್ಯಾಯ..!

Pinterest LinkedIn Tumblr

ಉಡುಪಿ: ತನ್ನ ಕುಟುಂಬಕ್ಕಾಗಿ ಗಂಡ ಬಿಟ್ಟು ಹೋದ ಎಕರೆಗಟ್ಟಲೆ ಆಸ್ತಿ ಇದ್ದರೂ, ಆಸ್ತಿಗಾಗಿ ಜಗಳವಾಡುತ್ತಿದ್ದ ತನ್ನದೇ ಮಕ್ಕಳಿಂದ ವಂಚನೆಗೊಳಗಾಗಿ ತುತ್ತು ಊಟಕ್ಕೂ ಇತರರ ಮುಂದೆ ಕೈ ಚಾಚಬೇಕಾಗಿ ಬಂದಿದ್ದ 85 ವರ್ಷದ ಮೊಂತಿನ್‌ ಡಿಸಿಲ್ವರಿಗೆ ಮಂಗಳೂರಿನಲ್ಲಿರುವ ಹಿರಿಯ ನಾಗರೀಕರ ಮೇಲ್ಮನವಿ ನ್ಯಾಯ ಮಂಡಳಿ ಪರಿಪೂರ್ಣ ನ್ಯಾಯ ನೀಡಿದೆ. ಸಂತ್ರಸ್ಥೆ ಮೊಂತಿನಮ್ಮ ಮಕ್ಕಳಿಗೆ ನೀಡಿದ್ದ ಆಸ್ತಿಗೆ ಸಂಬಂಧಿಸಿದ ವಿಭಾಗ ಪತ್ರ(Partition Deed) ಹಾಗೂ ಹಕ್ಕು ಖುಲಾಸೆ(Release Deed) ಪತ್ರಗಳನ್ನು ರದ್ದುಗೊಳಿಸಿ ಸಂಪೂರ್ಣ ಆಸ್ತಿಯ ಹಕ್ಕನ್ನು ತಾಯಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ ಹೇಳಿದರು.

ಈ ಕುರಿತು ಮಾಧ್ಯಮಗಳಿಗೆ ಸೋಮವಾರ ಮಾಹಿತಿ ನೀಡಿದ ಅವರು ವಯೋವೃದ್ಧೆ ಮೊಂತಿನಮ್ಮ ಕಲ್ಲಮುಂಡ್ಕೂರು ಗ್ರಾಮದ ದಿವಂಗತ ಬ್ಯಾಪ್ಟಿಸ್ಟ ಡಿಸಿಲ್ವರ ವಿಧವೆ. ಬ್ಯಾಪ್ಟಿಸ್ಟ್‌ ದಂಪತಿಗಳು ಸ್ವತಃ ದುಡಿದು ಗಳಿಸಿದ ಹಣದಿಂದ ಮಕ್ಕಳಿಗೆಲ್ಲ ಶಿಕ್ಷಣ ನೀಡಿ, ಮದುವೆ ಮಾಡಿಸಿದರು. ಜಮೀನುಗಳನ್ನು ಖರೀದಿಸಿದರು. 2006 ರಲ್ಲಿ ನಿಧನರಾದ ಬ್ಯಾಪ್ಟಿಸ್ಟ್‌ ಡಿಸಿಲ್ವ 6.25 ಎಕ್ರೆ ಜಮೀನು ಹಾಗೂ ಮನೆಯನ್ನು ಕುಟುಂಬಕ್ಕಾಗಿ ಬಿಟ್ಟು ಹೋಗಿದ್ದರು. ಕುಟುಂಬದ ಅಸ್ತಿಯಲ್ಲಿ ಪಾಲು ನೀಡಬೇಕೆಂದು ದಿನನಿತ್ಯವೂ ಆಗ್ರಹಿಸುತ್ತಿದ್ದ ಮಕ್ಕಳಿಗೆ ಮಣಿದ ಮೊಂತಿನಮ್ಮ ಪರಸ್ಪರ ಒಪ್ಪಿಗೆಯ ಮೂಲಕ ಜಮೀನುಗಳನ್ನು ಪಾಲು ಮಾಡಿಕೊಳ್ಳುವಂತೆ ಸೂಚಿಸಿದರು.

ಏನಿದು‌ ಸಮಸ್ಯೆ…
2009 ರಲ್ಲಿ ಎಲ್ಲಾ ಸದಸ್ಯರು ಸೇರಿ ವಿಭಾಗ ಪತ್ರವೊಂದರ ಮೂಲಕ ವಿವಿಧ ಸರ್ವೆ ನಂಬ್ರಗಳಲ್ಲಿದ್ದ ಜಮೀನುಗಳನ್ನೆಲ್ಲಾ ವಿಂಗಡಿಸಿ ಅವರವರ ಪಾಲಿಗೆ ಬಂದ ಆಸ್ತಿಗಳನ್ನು ತಂತಮ್ಮ ಹೆಸರಿಗೆ ವರ್ಗಾಯಿಸಿದರು. ಹಕ್ಕುಪತ್ರಗಳನ್ನೂ ಮಾಡಿಕೊಂಡರು. ತಾಯಿಯ ಪಾಲಿಗೆ ಬಂದ ಹಳೇ ಮನೆ ಹಾಗೂ 2.25 ಎಕ್ರೆ ಜಮೀನು ವಿಂಗಡಿಸಿಟ್ಟರೂ, ಅವರ ಪಾಲಿಗೆ ಬಂದ ಸರ್ವೆ ನಂಬ್ರಗಳಲ್ಲಿದ್ದ ಜಮೀನುಗಳ ಹಕ್ಕು ಪತ್ರಗಳಲ್ಲಿ ಮೊಂತಿನಮ್ಮನ ಹೆಸರು ದಾಖಲಾಗಲೇ ಇಲ್ಲ. ಬದಲಾಗಿ ತಾಯಿ ಮೊಂತಿನಮ್ಮನ ಪಾಲಿಗೆ ಬಂದ ಜಮೀನುಗಳಿಗೆ “ಎಲ್ಲಾ ಮಕ್ಕಳೂ ಜಂಟಿಯಾಗಿ ಹಕ್ಕುದಾರರು” ಎಂದು ವಿಭಾಗ ಪತ್ರದಲ್ಲೇ ದಾಖಲಿಸಿದರು. ಹಾಗೆಯೇ ಹಕ್ಕು ಪತ್ರಗಳಲ್ಲೂ ಮಕ್ಕಳ ಹೆಸರುಗಳು ಮಾತ್ರ ಸೇರಿಕೊಂಡವು. ಅಕ್ಷರ ಜ್ಞಾನವಿಲ್ಲದ ಮೊಂತಿನಮ್ಮನಿಗೆ ಅಕ್ಷರಸ್ಥ ಮಕ್ಕಳು ಮಾಡಿದ ಕಿತಾಪತಿ ತಿಳಿಯಲೇ ಇಲ್ಲ !

ತಾಯಿಯ ಪೋಷಣೆಯ ಜವಾಬ್ದಾರಿ ಯಾರದ್ದು ?
2014 ರಲ್ಲಿ ಪುನಃ ಮಕ್ಕಳೆಲ್ಲಾ ಸೇರಿ ತಾಯಿಯನ್ನು ನೋಡಿಕೊಳ್ಳುವರಾರು ಎಂದು ಚರ್ಚಿಸಿದರು. ಜೀವನ ಪರ್ಯಂತ ನೋಡಿಕೊಳ್ಳುವ ಜವಾಬ್ದಾರಿವಹಿಸಿಕೊಂಡ ಮಗಳೊಬ್ಬಳ ಹೆಸರಿಗೆ ತಾಯಿಯ ಪಾಲಿಗೆ ಬಂದಿದ್ದ ಮೂರು ಸರ್ವೆ ನಂಬ್ರದಲ್ಲಿರುವ ಜಮೀನುಗಳನ್ನು ವರ್ಗಾಯಿಸಿದರು. ಆಗಲೂ ಮೊಂತಿನಮ್ಮನಿಗೆ ಮಕ್ಕಳ ಕಿತಾಪತಿ ತಿಳಿಯಲೇ ಇಲ್ಲ. ಮಕ್ಕಳೆಲ್ಲಾ ಸೇರಿ ತನ್ನ ಅಂತಿಮ ದಿನಗಳನ್ನು ಸುಖವಾಗಿ ಕಳೆಯಲು ವ್ಯವಸ್ಥೆಯೊಂದನ್ನು ರೂಪಿಸುತ್ತಿದ್ದಾರೆ ಎಂದು ಭಾವಿಸಿ ಅವರು ಹೇಳಿದ ದಾಖಲೆಗಳಿಗೆಲ್ಲಾ ಸಹಿ ಹಾಕಿದರು. ತನ್ನ ಪಾಲನೆ ಮಾಡುತ್ತೇನೆಂದು ನಂಬಿಸಿದ ಮಗಳೂ ದೈನಂದಿನ ಖರ್ಚುಗಳಿಗೂ ಹಣ ನೀಡದಿದ್ದಾಗ, ತನ್ನ ಹಿಸ್ಸೆಗೆ ಬಂದ ಆಸ್ತಿಯನ್ನಾದರೂ ಮಾರಿ ಜೀವಿಸುತ್ತೇನೆಂದು ಮೊಂತಿನಮ್ಮ ನಿರ್ಧರಿಸಿದಾಗಲೇ ಅವರಿಗೆ ತಿಳಿಯಿತು-ತನ್ನ ವೈಯಕ್ತಿಕ ಹೆಸರಿನಲ್ಲಿ ಯಾವುದೇ ಆಸ್ತಿ ಉಳಿದಿಲ್ಲವೆಂದು!

ಪೊಲೀಸರಲ್ಲಿ ತಪ್ಪೊಪ್ಪಿಕೊಂಡ ಮಕ್ಕಳು..
ತನ್ನ ಬಳಿ ಉಳಿತಾಯವಾಗಲಿ, ಬೇರಾವ ಆದಾಯವಾಗಲಿ ಇಲ್ಲವಾದುದರಿಂದ ತನ್ನ ಪಾಲಿಗೆ ವಿಂಗಡಿಸಿದ್ದ ಆಸ್ತಿಯನ್ನು ಈ ಕೂಡಲೇ ತನಗೆ ಹಿಂದಿರುಗಿಸಬೇಕೆಂದು ಮೊಂತಿನಮ್ಮ ಮಂಗಳೂರಿನ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿದರು. ಪಾಂಡೇಶ್ವರ ಪೊಲೀಸ್‌ ಠಾಣೆಗೂ ದೂರು ನೀಡಿದರು. 30.05.2018 ರಂದು ಈ ಕುರಿತು ಪೊಲೀಸ್‌ ಠಾಣೆ ಹಾಗೂ ಸಹಾಯವಾಣಿ ಕೇಂದ್ರ ಕರೆದ ಸಭೆಯಲ್ಲಿ ಭಾಗವಹಿಸಿದ ಮಕ್ಕಳು ತಾವು ಮಾಡಿದ ಅನ್ಯಾಯಗಳನ್ನೆಲ್ಲಾ ಒಪ್ಪಿಕೊಂಡರು. ತಾಯಿಯ ಪಾಲಿಗೆ ಬಂದ ಜಮೀನುಗಳನ್ನೆಲ್ಲ ಆರು ತಿಂಗಳೊಳಗೆ ಅವರಿಗೇ ಹಿಂದಿರುಗಿಸಿ, ಆಕೆಯ ಹೆಸರಿನಲ್ಲಿಯೇ ಹಕ್ಕು ಪತ್ರ ಮಾಡಿಸುತ್ತೇವೆ ಎಂದು ಲಿಖಿತದಲ್ಲೇ ಒಪ್ಪಿಕೊಂಡರು.

ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು…
ಆರು ತಿಂಗಳು ಕಳೆದರೂ ಮಕ್ಕಳು ತನಗೆ ಆಸ್ತಿ ಹಿಂದಿರುಗಿಸದೇ ಇದ್ದಾಗ 12.12.2018 ರಂದು ಮೊಂತಿನಮ್ಮ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಕಾರದಿಂದ ಮಂಗಳೂರಿನ ಹಿರಿಯ ನಾಗರೀಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದರು. ಈ ಪ್ರಕರಣ ತನಿಖೆ ನಡೆಸಿದ ನ್ಯಾಯ ಮಂಡಳಿಯು 05.03.2019 ರಂದು ಆದೇಶವೊಂದನ್ನು ಹೊರಡಿಸಿ ಮಕ್ಕಳೆಲ್ಲ ಸೇರಿ ಪ್ರತಿ ತಿಂಗಳು ತಲಾ 2000 ರೂ.ಗಳನ್ನು ಕೊಡುವಂತೆ ಆದೇಶಿಸಿತು. ಅವರ ಜಮೀನು ಹಿಂತಿರುಗಿಸುವ ಕುರಿತು ಟಿಪ್ಪಣಿ ನೀಡಿದ ನ್ಯಾಯ ಮಂಡಳಿ “ಹಿರಿಯ ನಾಗರೀಕರಿಗೆ ಪೋಷಣೆ ಮಾಡದಿದ್ದಲ್ಲಿ ಮಾತ್ರ ಕಾಯಿದೆ 23ನೇ ನಿಯಮದಂತೆ ಆದೇಶ ಮಾಡುವುದು ಸಾಧ್ಯ” ಎಂಬ ಸ್ಪಷ್ಟನೆಯನ್ನೂ ನೀಡಿತ್ತು.

ಹಣ ಕೊಡುವುದಿಲ್ಲ ಎಂದು ಲಿಖಿತ ಹೇಳಿಕೆ..
ನ್ಯಾಯ ಮಂಡಳಿ ಆದೇಶ ನೀಡಿ 6 ತಿಂಗಳು ಕಳೆದರೂ ಯಾವ ಮಕ್ಕಳೂ ನಿಯಮಿತವಾಗಿ ಮಾಶಾಸನ ನೀಡದೇ ಇರುವುದರಿಂದ ಮೊಂತಿನಮ್ಮ ಪುನಃ ನ್ಯಾಯ ಮಂಡಳಿಗೆ ದೂರು ನೀಡಿದರು. 14.10.2019ರಂದು ನ್ಯಾಯ ಮಂಡಳಿ ಮಂಗಳೂರಿನ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ತನ್ನ ಆದೇಶ ಅಮಲ್ಜಾರಿಗೆ ಸೂಚಿಸಿತು. ವರ್ಷಗಳೆರಡು ಕಳೆದರೂ ನ್ಯಾಯ ಮಂಡಳಿಯ ಆದೇಶವನ್ನು ಜಾರಿಗೊಳಿಸಲು ಪೊಲೀಸ್‌ ಹಾಗೂ ಕಂದಾಯ ಇಲಾಖೆಗಳಿಂದ ಸಾಧ್ಯವಾಗಲಿಲ್ಲ. ಇದೇ ವೇಳೆ, ಮೊಂತಿನಮ್ಮನ ಮೂವರು ಮಕ್ಕಳು ನ್ಯಾಯ ಮಂಡಳಿಗೆ ಪತ್ರ ಬರೆದು “ತಾಯಿಗೆ ಮಾಶಾಸನ ನೀಡುವಂತೆ ಪೊಲೀಸ್‌ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿಗಳಿಂದ ನೋಟಿಸುಗಳು ಬರುತ್ತಿದ್ದು ಇವೆಲ್ಲ ನಮಗೆ ಮಾನಸಿಕವಾಗಿ ಅತೀವ ವೇದನೆ ಮತ್ತು ಕಿರಿ ಕಿರಿ ಉಂಟು ಮಾಡುತ್ತಿವೆ”. ಎಂದು ಉದ್ಧಟತನದಿಂದ ಉತ್ತರಿಸಿ ತಾವು ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಲಿಖಿತದಲ್ಲಿ ನೀಡಿದರು !

ಪ್ರತಿಷ್ಠಾನದ ಮೊರೆಗೆ ಮೊಂತಿನಮ್ಮ..
ಮಂಗಳೂರಿನ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಲು ಮೊಂತಿನಮ್ಮ ಪುನಃ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಹಿರಿಯ ನಾಗರೀಕರ ರಕ್ಷಣಾ ಕಾಯಿದೆಯ ಕಲಂ 23ರ ಪ್ರಕಾರ “ಹಿರಿಯರಿಂದ ಆಸ್ತಿ ಪಡಕೊಂಡವರು ಮೂಲಭೂತ ಸೌಕರ್ಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ಅಥವಾ ವಿಫಲರಾದಲ್ಲಿ ಅಂತಹ ಆಸ್ತಿ ವರ್ಗಾವಣೆಯನ್ನು ಅಸಿಂಧು ಎಂದು ನ್ಯಾಯ ಮಂಡಳಿಯು ಘೋಷಿಸುತ್ತದೆ” ಎಂಬುದನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಿದರು.

ವಯೋವೃದ್ಧೆ ಮೊಂತಿನಮ್ಮಳಿಗೆ ಕೊನೆಗೂ ಸಿಕ್ಕ ನ್ಯಾಯ..
ಇದೀಗ ಮೇಲ್ಮನವಿ ನ್ಯಾಯ ಮಂಡಳಿಯ ಅಧ್ಯಕ್ಷರಾದ ಡಾ.ಕೆ.ವಿ.ರಾಜೇಂದ್ರ ಅವರು ಮೊಂತಿನಮ್ಮನ ಮನವಿಯನ್ನು ಕಾಯಿದೆಯ ಕಲಂ 23ರಡಿಯಲ್ಲಿ ಅರ್ಹ ಪ್ರಕರಣವೆಂದು ಘೋಷಿಸಿ, ಮೊಂತಿನಮ್ಮ 6.3.2009ರಂದು ನೀಡಿದ ವಿಭಾಗ ಪತ್ರ ಹಾಗೂ 6.12.2014ರಂದು ಮಕ್ಕಳಿಗೆ ನೀಡಿರುವ ಹಕ್ಕು ಖುಲಾಸೆ ಪತ್ರವನ್ನು ಅಸಿಂಧುಗೊಳಿಸಿದ್ದಾರೆ ಹಾಗೂ ಆಸ್ತಿಯ ಸಂಪೂರ್ಣ ಹಕ್ಕನ್ನು ಮೊಂತಿನಮ್ಮಳ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಹೇಳಿದರು.

 

Comments are closed.