ಕರಾವಳಿ

ಆಗುಂಬೆ ಘಾಟಿಯಲ್ಲಿ ಭೂ ಕುಸಿತ: ಜುಲೈ 12 ರತನಕ ಸಂಚಾರ ನಿರ್ಬಂಧ, ವಾಹನ ಸಂಚಾರಕ್ಕೆ‌ ಪರ್ಯಾಯ ಮಾರ್ಗ

Pinterest LinkedIn Tumblr

ಉಡುಪಿ/ಶಿವಮೊಗ್ಗ:  ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ- ಉಡುಪಿ ರಸ್ತೆಯಲ್ಲಿ ಬರುವ ಆಗುಂಬೆ ಘಾಟಿಯಲ್ಲಿನ 11 ನೇ ತಿರುವಿನ ಬಳಿಯಲ್ಲಿ ಜುಲೈ 10 ರ ಮುಂಜಾನೆ 5:30 ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದ್ದ ಹಿನ್ನಲೆ ತೆರವು ಕಾರ್ಯ ನಡೆಯುತ್ತಿರುವುದರಿಂದ ಜು.12 ಮಂಗಳವಾರದವರೆಗೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ.

ಭೂ ಕುಸಿತದ ಮಣ್ಣು ಮತ್ತು 20 ಮರಗಳು ರಸ್ತೆಯ ಮೇಲೆ ಬಿದ್ದಿದ್ದು ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಸ್ತೆಯಲ್ಲಿನ ವಾಹನ ಸಂಚಾರವನ್ನು ರಾ.ಹೆ. 169 ಕೊಲ್ಲಾಪುರ- ಮಂಗಳೂರು ರಸ್ತೆಯಲ್ಲಿ ಚಲಿಸಲು ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಅನುವು ಮಾಡಿ ಕೊಡಲಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ತೆರವುಗೊಳಿಸುವಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಾಥಮಿಕ ಹಂತದ ತೆರವುಗೊಳಿಸುವಿಕೆ ತಡರಾತ್ರಿಯವರೆಗೂ ಮುಂದುವರೆದಿದ್ದು ಸೋಮವಾರವೂ ತೆರವು ಕಾರ್ಯ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಜು.12 ರ ಮುಂಜಾನೆ 8 ಗಂಟೆಯವರೆಗೆ ನಿರ್ಬಂಧಿಸಿ ಮತ್ತು ಜು. 30‌ ರವರೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಾರ್ವಜನಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎ)(2) & (5) ರನ್ವಯ, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ ಮೂಲಕ ಎಲ್ಲಾ ರೀತಿಯ ವಾಹನ ಸಂಚಾರವನ್ನು ಈ ಕೆಳಕಂಡ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಿ ಆದೇಶಿಸಿದೆ.

ವಾಹನ ಸಂಚರಿಸಲು ಆಗುಂಬೆ ಘಾಟ್ ಮಾರ್ಗದ ಬದಲಿ ಮಾರ್ಗದ ವಿವರ..

1. ರಾಷ್ಟ್ರೀಯ ಹೆದ್ದಾರಿ 169-  ತೀರ್ಥಹಳ್ಳಿ- ಕೊಪ್ಪ – ಕಾರ್ಕಳ – ಮಂಗಳೂರು
2. ರಾಷ್ಟ್ರೀಯ ಹೆದ್ದಾರಿ 169 ಎ-  ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಕಾರ್ಕಳ- ಮಂಗಳೂರು
3. ತೀರ್ಥಹಳ್ಳಿ- ಮಾಸ್ತಿಕಟ್ಟೆ- ಕುಂದಾಪುರ

Comments are closed.