ಕರಾವಳಿ

ಅಕ್ರಮ ಗೋ ಸಾಗಾಟ: ಚೇಸ್ ಮಾಡಿ ಕಾರು ವಶಕ್ಕೆ ಪಡೆದು ಜಾನುವಾರು ರಕ್ಷಿಸಿದ ಗಂಗೊಳ್ಳಿ ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಳವು ಮಾಡಿದ ಗೋವನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಪೊಲೀಸರು ಬೆನ್ನಟ್ಟಿ ಕಾರು ವಶಕ್ಕೆ ಪಡೆದು ಜಾನುವಾರನ್ನು ರಕ್ಷಿಸಿದ್ದಾರೆ. ಈ ವೇಳೆ ಕಾರು ಚಾಲಕ ಹಾಗೂ ಇತರರು ಪರಾರಿಯಾದ ಘಟನೆ ಗಂಗೊಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ರಸ್ತೆಯಲ್ಲಿ ಕಾರು ನಿಲ್ಲಿಸಿ ಚಾಲಕ ಹಾಗೂ ಇತರರು ಕಾರಿನಿಂದ ಇಳಿದು ಗೇರು ಹಾಡಿಯಲ್ಲಿ ಓಡಿ ಹೋಗಿದ್ದು‌ ಪರಾರಿಯಾದ ಕಾರಿನ ಚಾಲಕನನ್ನು ಡ್ಯಾನೀಶ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಜು.2 ರಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ‌ಇಕೋ‌ ಸ್ಪೋರ್ಟ್ ಕಾರೊಂದನ್ನು ತಪಾಸಣೆ ನಡೆಸುವಂತೆ ನೀಡಿದ ಸೂಚನೆಯಂತೆ ಗಂಗೊಳ್ಳಿ‌ ಠಾಣಾಧಿಕಾರಿ ವಿನಯ್ ಎಂ. ಕೊರ್ಲಹಳ್ಳಿಯವರು ಸಿಬ್ಬಂದಿಗಳ ಜೊತೆ ತ್ರಾಸಿ ಜಂಕ್ಷನ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಇಕೋ ಸ್ಫೋರ್ಟ್ಸ್‌ ಕಾರು ಕುಂದಾಪುರ ಕಡೆಗೆ ವೇಗವಾಗಿ ಬಂದಿದ್ದು, ಕಾರನ್ನು ನಿಲ್ಲಿಸಲು ಸೂಚಿಸಿದರೂ ಕೂಡ ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಪಿಎಸ್ಐ ಕಾರನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ರಾತ್ರಿ 10:30 ರ ವೇಳೆಗೆ ಮುಳ್ಳಿಕಟ್ಟೆ ಜಂಕ್ಷನ್ ಬಳಿ ತಲುಪುವಾಗ ಮುಳ್ಳಿಕಟ್ಟೆ ಜಂಕ್ಷನ್ ನಲ್ಲಿ ತನಿಖಾ ವಿಭಾಗದ ಪಿಎಸ್ಐ ಜಯಶ್ರೀ ಹುನ್ನೂರ ಹಾಗೂ ಸಿಬ್ಬಂದಿಗಳು ಈ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಅತೀ ವೇಗವಾಗಿ ಚಲಾಯಿಸಿಕೊಂಡು ಬ್ಯಾರಿಕೇಡ್‌ ಗೆ ಢಿಕ್ಕಿ ಹೊಡೆದು ಕಾರನ್ನು ನಾಯಕ್‌ವಾಡಿ ಕಡೆಗೆ ತಿರುಗಿಸಿ ಹೋಗಿದ್ದು ಪೊಲೀಸರ ತಂಡ ಕಾರನ್ನು ಬೆನ್ನಟ್ಟಿಕೊಂಡು ಹೋದಾಗ ಚಾಲಕನು ಕಾರನ್ನು ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ರಸ್ತೆಯಲ್ಲಿ ನಿಲ್ಲಿಸಿ ಕಾರಿನ ಚಾಲಕ ಹಾಗೂ ಇತರರು ಕಾರಿನಿಂದ ಇಳಿದು ಗೇರು ಹಾಡಿಯಲ್ಲಿ ಓಡಿ ಹೋಗಿದ್ದಾರೆ. ಓಡಿ ಹೋದ ಕಾರಿನ ಚಾಲಕನನ್ನು ಗುರುತಿಸಿದ್ದು, ಡ್ಯಾನೀಶ್ ಎನ್ನುವಾತ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಒಂದು ಜಾನುವಾರು ಇದ್ದು ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡು ಬಂದಿದ್ದು ಜಾನುವಾರನ್ನು ಕಳವು ಮಾಡಿ, ವಧಿಸಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಆರೋಪಿ ಬಂಧನಕ್ಕೆ ಬಲೆ‌ಬೀಸಲಾಗಿದೆ.

Comments are closed.