ಕರಾವಳಿ

ಅತ್ರಾಡಿ ಮದಗದಲ್ಲಿ ತಾಯಿ-ಮಗು ಜೋಡಿ ಕೊಲೆ ಆರೋಪಿ ಬಂಧನ; ಚೆಲುವಿಯ ಸಂಬಂಧಿಯೇ ಹಂತಕ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ವಾಸವಾಗಿರುವ ಚೆಲುವಿ (28) ಮತ್ತು 10 ವರ್ಷ ಪ್ರಾಯದ ಮಗಳನ್ನು ಮೇ.8ರಂದು ರಾತ್ರಿ ಅಪರಿಚಿತರು ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಮೃತಳ ತಂಗಿ ದೇವಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು 2 ದಿನದೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಆರೋಪಿ ಹರೀಶ ಆರ್‌ ಯಾನೆ ಗಣೇಶ (29) ಎಂಬಾತ ಬಂಧಿತ ಆರೋಪಿ.

ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಪಿಎಸ್ಐಗಳಾದ ಅನಿಲ್ ಬಿ ಮಾದರ, ಮಧು ಬಿ.ಇ, ಪ್ರೊಬೆಷನರಿ ಪಿ.ಎಸ್.ಐ.ಗಳಾದ ಮಂಜುನಾಥ ಮರಬದ, ರವಿ ಬಿ ಕಾರಗಿ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ನಿತಿನ್‌ ಇದ್ದ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸಿದ್ದಾರೆ.

ಚೆಲುವಿ ಬಗ್ಗೆ ಸಂಶಯ….!
ಆರೋಪಿ ಹರೀಶ ಎಂವಾತ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಮಾತ್ರವಲ್ಲದೆ ಚೆಲುವಿಯನ್ನು ಮದುವೆ ಆಗಬೇಕೆಂದು ಒತ್ತಾಯಿಸುತ್ತಿದ್ದನು. ಚೆಲುವಿಯು ಬೇರೆ ಗಂಡಸರೊಂದಿಗೆ ಪೋನ್‌‌ನಲ್ಲಿ ಮಾತನಾಡುತ್ತಿದ್ದಾಳೆ ಎಂಬುದಾಗಿ ಸಂಶಯದಿಂದ ದ್ವೇಷಗೊಂಡು ಮೇ.8 ರಂದು ರಾತ್ರಿ ಅವಳ ಮನೆಗೆ ತೆರಳಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಪೋನಿನಲ್ಲಿ ಸಂಪರ್ಕದಲ್ಲಿರುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದ್ದು ಚೆಲುವಿ ಮಲಗಿದ್ದ ಸಮಯ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ ಮೊಬೈಲ್‌‌‌ ಪೋನ್‌‌ನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್‌ .ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಂತೆ, ಉಡುಪಿ‌ ಡಿವೈಎಸ್ಪಿ ಸುಧಾಕರ ಎಸ್‌ ನಾಯ್ಕ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಹಿರಿಯಡ್ಕ ಠಾಣಾ ಪಿ.ಎಸ್.ಐ ಅನಿಲ್‌ ಬಿ ಮಾದರ, ಕೋಟ ಠಾಣೆಯ ಪಿ.ಎಸ್‌‌.ಐ ಮಧು ಬಿ.ಇ, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ ಮತ್ತು ರವಿ ಬಿ.ಕಾರಗಿ ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್.ಐ ಕೃಷ್ಣಪ್ಪ, ಪ್ರದೀಪ್‌ ನಾಯಕ, ವಾಸುದೇವ ಪಿ, ರವೀಂದ್ರ ಹೆಚ್‌. ಶೇಖರ ಸೇರಿಗಾರ ಹಿರಿಯಡ್ಕ ಠಾಣೆಯ ಎ.ಎಸ್.ಐ ಗಂಗಪ್ಪ & ಜಯಂತ, ಸಿಬ್ಬಂದಿಯವರಾದ ರಘು, ಸದಾಶಿವ, ರಾಘವೇಂದ್ರ ಕೆ, ದಯಾನಂದ ಪ್ರಭು, ಉದಯ ಕಾಮತ್‌‌, ರಾಜೇಶ ಡಿ ಗಾರ್‌, ಸುರೇಖಾ, ರಾಕೇಶ ಶೆಟ್ಟಿ, ನಿತಿನ್‌, ಭೀಮಪ್ಪ, ಅಶೋಕ, ಸಂತೋಷ, ಕಾರ್ತಿಕ, ಆನಂದ, ಕೋಟ ಠಾಣೆಯ ಗಣೇಶ, ರಾಘವೇಂದ್ರ, ಬ್ರಹ್ಮಾವರ ಠಾಣೆಯ ಪ್ರವೀಣ ಶೆಟ್ಟಿಗಾರ್‌ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ ಮೊದಲಾದವರು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಕರಣವನ್ನು ಅತೀ ಶೀಘ್ರವಾಗಿ ಭೇದಿಸಿರುವುದಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಎನ್‌‌ ಅವರು ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

Comments are closed.