ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಪ್ರಕರಣದ ಕುರಿತು ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ವಿಚಾರಣೆಯನ್ನು ಮಂಗಳವಾರ ಮಧಾಹ್ನ 2.30 ಕ್ಕೆ ಮುಂದೂಡಿದೆ.
ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಫೆ 14 ಮಧ್ಯಾಹ್ನ 2.30ಕ್ಕೆ ಆರಂಭಿಸಿ ಸುದೀರ್ಘ ವಾದವನ್ನು ಆಲಿಸಿತು.

ಆರ್ಟಿಕಲ್ 25 ಪ್ರಕಾರ ಶಿರವಸ್ತ್ರ ಧರಿಸುವುದು ತಪ್ಪಲ್ಲ ಎಂದು ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಹಲವು ವಿಚಾರಗಳನ್ನು ಉಲ್ಲೇಖಿಸಿ ವಿಧ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿದರು.
25 ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ, ಎಲ್ಲಾ ನಾಗರಿಕರಿಗೆ ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಪ್ರತಿ ಧಾರ್ಮಿಕ ಪಂಗಡವು ನೈತಿಕತೆ, ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟು ಹಕ್ಕುಗಳನ್ನು ಹೊಂದಿರುವ ಬಗೆಗಾಗಿದೆ.
ಮಾತ್ರವಲ್ಲದೆ ಇಸ್ಲಾಂ ಶರಿಯಾ ಕಾನೂನುಗಳ ಡ್ರೆಸ್ ಕೋಡ್ ಕುರಿತು ಉಲ್ಲೇಖ ಮಾಡಲಾಗಿದೆ.ಈ ಹಿಂದೆ ವಿಚಾರಣೆಗೊಳಗಾದ ಹಲವು ಪ್ರಕರಣಗಳ ತೀರ್ಪಿನ ಬಗ್ಗೆ ಪ್ರಸ್ತಾವಿಸಲಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಹೆಡ್ ಸ್ಕಾರ್ಫ್ ಗಳನ್ನು ಧರಿಸಲು ಅನುಮತಿ ನೀಡಲಾಗಿದೆ.
ಕಳೆದ 2 ವರ್ಷಗಳಿಂದ ವಿದ್ಯಾರ್ಥಿನಿಯರು ಉಡುಪಿಯ ಕಾಲೇಜಿಗೆ ಹೋಗುತ್ತಿದ್ದು, ಯೂನಿಫಾರ್ಮ್ ನ ಬಣ್ಣದ ಹಿಜಾಬನ್ನೇ ಪ್ರವೇಶಾತಿ ಪಡೆದಾಗಿನಿಂದ ಧರಿಸುತ್ತಿದ್ದಾರೆ ಎಂದು ವಕೀಲ ಕಾಮತ್ ಹೇಳಿದರು.
ಫೆ. 10 ಗುರುವಾರ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಬೇಕು, ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತುಗಳನ್ನು (ಹಿಜಾಬ್ ಮತ್ತು ಕೇಸರಿ ಶಾಲು) ಬಳಸುವಂತಿಲ್ಲ ಎಂದು ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು.
Comments are closed.