ಕುಂದಾಪುರ: ದಾರಿಹೋಕರು ತಿರುಗಾಡುವ ನಡೆದಾರಿ ಹಾಗೂ ಕೃಷಿ ಗದ್ದೆ ಬಳಿಯಿದ್ದ ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಸಳ್ವಾಡಿ ಬಳಿಯ ಕರಿಕಲ್ ಕಟ್ಟೆ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ.
ಮೂಲತಃ ನಾಡ ಕೋಣ್ಕಿ ನಿವಾಸಿ ರಘುರಾಮ ಶೆಟ್ಟಿ (53) ಮೃತ ದುರ್ದೈವಿ. ಸೋಮವಾರ ತಡರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಘಟನೆ ವಿವರ..
ಕೋಣ್ಕಿಯವರಾದ ರಘುರಾಮ ಶೆಟ್ಟಿ ಬಾಗಲಕೋಟೆಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲ ದಿನಗಳ ಹಿಂದೆ ತಾಯಿ ನಿಧನದ ಹಿನ್ನೆಲೆ ಊರಿಗೆ ಆಗಮಿಸಿದ್ದರು. ಇತ್ತೀಚೆಗೆ ಪತ್ನಿ ಮನೆಯಾದ ಕಾಳಾವಾರದ ಕರಿಕಲ್ ಕಟ್ಟೆಗೆ ಬಂದಿದ್ದ ಅವರು ಸೋಮವಾರ ರಾತ್ರಿ ಇಲ್ಲಿಗೆ ಸಮೀಪ ನಡೆದ ಯಕ್ಷಗಾನಕ್ಕೆ ತೆರಳಿದ್ದರು. ಕಾಲಮಿತಿಯ ಯಕ್ಷಗಾನ ಕಂಡು ವಾಪಾಸ್ ಪತ್ನಿ ಮನೆಗೆ ತೆರಳುವಾಗ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇನ್ನು ಕೃಷಿಗದ್ದೆಗಳ ಸಮೀಪವಿರುವ ಖಾಸಗಿಯವರ ಬಾವಿಗೆ ಆವರಣವಿಲ್ಲ. ಈ ನಡೆದಾರಿಯಲ್ಲೇ ಸಾಗಿ ಆ ಭಾಗದ ಹತ್ತಾರು ಮನೆಗಳಿಗೆ ಸಾಗಬೇಕಿದೆ. ನಿತ್ಯ ವಿದ್ಯಾರ್ಥಿಗಳು ಕೂಡ ಇದೇ ಕಾಲು ದಾರಿ ಅವಲಂಬಿಸಿದ್ದಾರೆ.
Comments are closed.