ಕರಾವಳಿ

ಮದುವೆ ಕಾರ್ಯಕ್ರಮದ ವೇಳೆ ವೇಷ ಧರಿಸಿ ಕೊರಗಜ್ಜನಿಗೆ ಅವಹೇಳನ ಪ್ರಕರಣ: ಇಬ್ಬರ ಬಂಧನ

Pinterest LinkedIn Tumblr

ಮಂಗಳೂರು: ಸಾಲೆತ್ತೂರಿನಲ್ಲಿ ಅನ್ಯ ಧರ್ಮದ ಯುವಕರ ತಂಡವೊಂದು ಮದುವೆ ಸಂಭ್ರಮದಲ್ಲಿ ತುಳುನಾಡಿನ ಕೊರಗಜ್ಜನ ವೇಷ ಧರಿಸಿ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಇಬ್ಬರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಲ್ಪಾಡಿ ನಿವಾಸಿ ಅಹ್ಮದ್ ಮುಜಿತಾಬ್ (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದಿನ್ ಮುನಿಶ್ (19) ಎಂದು ಗುರುತಿಸಲಾಗಿದೆ.

ಉಪ್ಪಳದ ಯುವಕನ ಜೊತೆ ನಡೆದಿದ್ದ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ‌ ಮದುವೆಯಲ್ಲಿ ವಧುವಿನ‌ ಮನೆಗೆ ವರನ ಸ್ನೇಹಿತ ಬಳಗ ಆಗಮಿಸಿದ್ದು, ಈ ವೇಳೆ ವರ ಕೊರಗಜ್ಜರನ್ನು ಹೋಲುವ ವೇಷ ಭೂಷಣ ಧರಿಸಿದ್ದರು.ಈ ವೇಳೆ ಮದುಮಗ ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದ ಆರೋಪ ವ್ಯಕ್ತವಾಗಿ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಸಂಬಂಧ ವಿಟ್ಲ ಪಡ್ನೂರು ಗ್ರಾಮದ ವ್ಯಕ್ತಿಯೊಬ್ಬರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಿಂದೂಗಳ ಧಾರ್ಮಿಕ ಭಾವನೆಗೆ ಅಪಮಾನಗೊಳಿಸಿ ಧಕ್ಕೆ ತಂದಿದ್ದ, ವರ,ವಧುವಿನ ಮನೆಯವರು ಹಾಗೂ ಕೃತ್ಯದಲ್ಲಿ ತೊಡಗಿರುವ ವರನ ಸ್ನೇಹಿತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

Comments are closed.