ಕರ್ನಾಟಕ

ಆತ್ಮಗಳ ಜೊತೆ ಮಾತನಾಡುವೆ ಎಂಬ ಭ್ರಮೆಗೆ ಬಿದ್ದು ಮನೆಯಿಂದ ನಾಪತ್ತೆಯಾದ ಬೆಂಗಳೂರಿನ 17ರ ಬಾಲಕಿ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಿಂದ ಓರ್ವ ಅಪ್ರಾಪ್ತ ಬಾಲಕಿ ಅ.31 ರಿಂದ ನಾಪತ್ತೆಯಾಗಿದ್ದಾಳೆ ಎಂದು ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

17 ವರ್ಷದ ಬಾಲಕಿ ಅನುಷ್ಕ ವರ್ಮಾ ಕಳೆದ ಅಕ್ಟೋಬರ್ 31ರಂದು ಬೆಳಗ್ಗೆ 8.30ಕ್ಕೆ ಮನೆಬಿಟ್ಟು ಹೋದವಳು ಇದುವರೆಗೆ ಹಿಂತಿರುಗಿಲ್ಲ. ಪೊಲೀಸರು ಇಷ್ಟು ದಿನ ತೀವ್ರ ಹುಡುಕಾಟ ನಡೆಸಿದರೂ ಕೂಡ ಇನ್ನೂ ಆಕೆಯ ಸುಳಿವು ಸಿಕ್ಕಿಲ್ಲ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕೂಡ ತಮ್ಮ ಮಗಳನ್ನು ಹುಡುಕಿಕೊಡಿ ಎಂದು ವಿನಂತಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅನುಷ್ಕಾಳ ತಂದೆ ಅಭಿಷೇಕ್ ವರ್ಮ, ತಮ್ಮ ಮಗಳು ಮಾಟ-ಮಂತ್ರದ ಪ್ರಭಾವಕ್ಕೆ ಒಳಗಾಗಿದ್ದಳು. ಆತ್ಮಗಳ ಜೊತೆ ಮಾತನಾಡುವೆ ಎಂಬ ಮೋಡಿಗೆ ಒಳಗಾಗಿದ್ದಳು. ಆಕೆಗೆ ಕೆಲವು ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ, ಬೆಂಬಲವಿತ್ತು. ಮಗಳು ಕಾಣೆಯಾದ ದಿನದಿಂದ ನಮ್ಮ ಜೀವನ ನರಕವಾಗಿಬಿಟ್ಟಿದೆ ಎಂದರು.

ಅಕ್ಟೋಬರ್ 31ರಂದು ನಾನು ಮತ್ತು ನನ್ನ ಪತ್ನಿ ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ವಾಕಿಂಗ್ ಹೋಗಿ 8.15ರ ಹೊತ್ತಿಗೆ ವಾಪಸ್ಸಾಗಿದ್ದೆವು. ಮನೆಗೆ ಹಿಂತಿರುಗಿದಾಗ ಮಗಳು ಇರಲಿಲ್ಲ. ಹುಡುಕಿದಾಗ ಸಿಗದಿದ್ದಾಗ ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದೆವು. ಕೊನೆಗೆ ಪೊಲೀಸರ ಮೂಲಕ ಸಿಸಿಟಿವಿ ಪರಿಶೀಲಿಸಿದಾಗ ನಮ್ಮ ಮಗಳು ಆಟೋರಿಕ್ಷಾದಲ್ಲಿ ಹೊರಮಾವು ಕಡೆಗೆ ಹೋಗಿದ್ದಾಳೆ ಎಂದು ಗೊತ್ತಾಯಿತು. ನಂತರ ಆಕೆ ಎಲ್ಲಿ ಹೋದಳು, ಆಕೆಗೆ ಏನಾಯಿತು ಎಂದು ಇದುವರೆಗೆ ತಿಳಿಯುತ್ತಿಲ್ಲ ಎಂದರು.

ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇರೆ ನವೆಂಬರ್ 1ರಂದು ಪೊಲೀಸರು ಸೆಕ್ಷನ್ 363ರಡಿ ಕೇಸು ದಾಖಲಿಸಿಕೊಂಡಿದ್ದಾರೆ. ಮನೆಯಿಂದ ಹೋಗುವಾಗ ಅನುಷ್ಕಾ ತನ್ನ ಮೊಬೈಲ್ ಸೇರಿದಂತೆ ಶಾಲೆಯ ವಸ್ತುಗಳನ್ನು ಬಿಟ್ಟು ಹೋಗಿದ್ದಾಳೆ. ಒಂದು ಜೊತೆ ಬಟ್ಟೆ ಮತ್ತು 2 ಸಾವಿರ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಳೆ ಎಂದು ಬೆಂಗಳೂರು ಉತ್ತರ ವಿಭಾಗದ ಉಪ ಆಯುಕ್ತ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

Comments are closed.