ಕರ್ನಾಟಕ

ಅಪ್ರಾಪ್ತ ವಯಸ್ಸಿನ ಮಗಳಿಗೆ ವಾಹನ ಚಲಾಯಿಸಲು ನೀಡಿದ ತಂದೆಗೆ 25 ಸಾವಿರ ರೂ. ದಂಡ, 1 ದಿನ ಜೈಲು ವಾಸ..!

Pinterest LinkedIn Tumblr

ಮಡಿಕೇರಿ: ಅಪ್ರಾಪ್ತ ವಯಸ್ಸಿನ ಮಗಳಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಹಿನ್ನೆಲೆ ಕೊಡಗು ಜಿಲ್ಲೆಯ ಕುಶಾಲನಗರ ಜೆಎಂಎಫ್​ಸಿ ನ್ಯಾಯಾಲಯ ಬಾಲಕಿಯ ತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲದೆ ಒಂದು ದಿನದ ಜೈಲು ಶಿಕ್ಷೆ ಸಹ ವಿಧಿಸಿದೆ.

ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದ ಅಂತೋಣಿ ಶಿಕ್ಷೆಗೆ ಗುರಿಯಾದವರು. ಇದೇ ಜನವರಿ 6 ರಂದು ನಂಜರಾಯಪಟ್ಟಣ ಗ್ರಾಮದ ದುಬಾರೆ ಜಂಕ್ಷನ್ ಬಳಿ ಸ್ಕೂಟರ್ ಮತ್ತು ಬೈಕ್ ಮಧ್ಯೆ ಅಪಘಾತ ನಡೆದಿತ್ತು. ಅಂಥೋಣಿಯವರ ಅಪ್ರಾಪ್ತ ವಯಸ್ಸಿನ ಪುತ್ರಿ ಸ್ಕೂಟರ್ ಚಲಾಯಿಸುತ್ತಿದ್ದರು. ದುಬಾರೆ ಜಂಕ್ಷನ್ ಬಳಿ ಬಾಲಕಿಯ ಸ್ಕೂಟರ್ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ. ಈ ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ಸಂದರ್ಭ ಬಾಲಕಿ ಲೈಸೆನ್ಸ್ ಇಲ್ಲದೆ ಅಜಾಗರೂಕರೆಯಿಂದ ಬೈಕ್ ಚಲಾಯಿಸಿದ್ದು ಬೆಳಕಿಗೆ ಬಂದಿದೆ. ಇದನ್ನು ಗಂಭಿರವಾಗಿ ಪರಿಗಣಿಸಿದ ಕುಶಾಲನಗರ ಜೆಎಂಎಫ್​ಸಿ ನ್ಯಾಯಾಲಯ, ಅಪ್ರಾಪ್ತ ಮಗಳಿಗೆ ತಂದೆ ಬೈಕ್ ನೀಡಿದ್ದೇ ತಪ್ಪು ಎಂದು ಅಭಿಪ್ರಾಯಪಟ್ಟಿದೆ.‌ ಮಾತ್ರವಲ್ಲ ಬೈಕ್ ನೀಡಿ ಬೇಜವಾಬ್ದಾರಿ ಮೆರೆದ ತಂದೆಗೆ ಒಂದು ದಿನದ‌ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ‌ನೀಡಿದೆ.

Comments are closed.