ಕರಾವಳಿ

ಸೌದಿ ಜೈಲಿನಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರ: ಏರ್‌ಪೋರ್ಟ್’ನಲ್ಲಿ‌ ಸ್ವಾಗತ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಫೇಸ್‌ಬುಕ್‌ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ ಆರೋಪದಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿಯಾಗಿದ್ದ ಕುಂದಾಪುರ ತಾಲೂಕು ಕೋಟೇಶ್ವರ ಸಮೀಪದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಒಂದು ವರ್ಷ ಏಳು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಬುಧವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ದೋಹಾ ಮೂಲಕ ಆಗಸ್ಟ್ 18 ರಂದು 2.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು 6.30ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಹರೀಶ್ ಅವರನ್ನು ಪತ್ನಿ‌, ಮಗು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೆ ಹರೀಶ್ ಬಂಗೇರ ಬಿಡುಗಡೆಗಾಗಿ ನಿರಂತರವಾಗಿ ಶ್ರಮಿಸಿದ ಲೋಕೇಶ್ ಅಂಕದಕಟ್ಟೆ ಹಾಗೂ ತಂಡ ಜೊತೆಗಿದ್ದು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದೆ. ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ಹುಟ್ಟೂರಿಗೆ ಆಗಮಿಸುವ ಬಗ್ಗೆ ಮಾಹಿತಿಯಿದೆ.

ಘಟನೆ ಹಿನ್ನೆಲೆ…
ಹರೀಶ್‌ ಬಂಗೇರ ಅವರ ಹೆಸರಲ್ಲಿ ಫೇಸ್‌ ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಹರೀಶ್ ಮಾಡಿದ್ದರೆಂದು ಬಿಂಬಿತವಾದ್ದರಿಂದ ಸೌದಿ ಪೊಲೀಸರು ಬಂಗೇರ ಅವರನ್ನು ಬಂಧಿಸಿದ್ದರು. ಆದರೆ ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಅನಗತ್ಯ ಫೋಸ್ಟ್ ಮಾಡಿರುವ ಕುರಿತು ತನಿಖೆ ನಡೆಸುವಂತೆ ಅವರ ಪತ್ನಿ ನೀಡಿರುವ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.ಪ್ರಕರಣದ ವಿಚಾರಣೆಯಲ್ಲಿ ಹರೀಶ್ ಬಂಗೇರ ಅವರ ನಕಲಿ ಖಾತೆ ತೆರೆದಿರುವ ಹಾಗೂ ಈ ಖಾತೆಗೂ ಬಂಗೇರ ಅವರಿಗೂ ಸಂಬಂಧ ಇಲ್ಲದೆ ಇರುವ ಅಂಶಗಳು ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕಂಡು ಬಂದಿದ್ದ ಅಂಶಗಳನ್ನು ರಾಯಭಾರಿ ಕಚೇರಿ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೂ ತಲುಪಿಸಲಾಗಿತ್ತು.

ಹರೀಶ್ ಬಂಗೇರ ಬಿಡುಗಡೆಯ ಹೋರಾಟದಲ್ಲಿ ಲೋಕೇಶ್ ಅಂಕದಕಟ್ಟೆ ಹಾಗೂ ವಿವಿಧ ಸಮಾನಮನಸ್ಕರು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ‌ನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ‌ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ‌ ಶ್ರೀನಿವಾಸ್‌ ಶೆಟ್ಟಿ‌, ಪೊಲೀಸ್ ಅಧಿಕಾರಿ ಕಮಲಪಂತ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂಚೂಣಿಯಲ್ಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೂಡ ಸಕಾರಾತ್ಮಕವಾಗಿ ಸ್ಪಂದನೆ ನೀಡಿತ್ತು.

Comments are closed.