ಕರಾವಳಿ

ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದೆ. ಶಾಸಕ ಕಾಮಾತ್ ಆರೋಪ

Pinterest LinkedIn Tumblr

ಮಂಗಳೂರು: ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟ ಆಡುವುದನ್ನು ಮೊದಲು ನಿಲ್ಲಿಸ ಬೇಕು. ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನತೆ ವೆನ್ಲಾಕ್‌ಗೆ ಬರಲು ಭಯಪಡುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಬಡವರು ಸರಕಾರಿ ಆಸ್ಪತ್ರೆಗೆ ಬರದಂತೆ ಭಯ ತುಂಬುತ್ತಿದೆ. ಆರೋಗ್ಯ ವಿಷಯದ ಈ ರೀತಿಯ ರಾಜಕಾರಣ ಕಾಂಗ್ರೆಸ್‌ಗೆ ಶೋಭೆಯಲ್ಲ ಎಂದರು.

ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ವೆನ್ಲಾಕ್‌ಗೆ ಹೇಳಿಕೊಳ್ಳುವ ಯಾವ ಕೊಡುಗೆಯೂ ದೊರೆತಿಲ್ಲ. ಆದರೆ ಬಿಜೆಪಿ ಒಂದೇ ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಯು.ಟಿ.ಖಾದರ್ ಅವರು ರಾಜ್ಯದ ಆರೋಗ್ಯ ಸಚಿವರಾಗ್ದಿರೂ ವೆನ್ಲಾಕ್‌ಗೆ ಯಾವುದೇ ಲಾಭವಾಗಿಲ್ಲ.

ವೆನ್ಲಾಕ್‌ನಲ್ಲಿ ಇದುವರೆಗೆ ಕೇವಲ 12 ಇಂಟೆನ್‌ಸಿವ್ ಕೇರ್ ಇತ್ತು. ಆದರೆ ಕೊರೋನಾ ಜಿಲ್ಲೆಯನ್ನು ಕಾಡಿದ ಬಳಿಕ ಒಂದೇ ವರ್ಷದಲ್ಲಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಸರಕಾರದ ಮುತುವರ್ಜಿಯಿಂದಾಗಿ 70 ವೆಂಟಿಲೇಟರ್‌ಗಳು ಸದ್ಯ ವೆನ್ಲಾಕ್‌ನಲ್ಲಿವೆ. ಅಲ್ಲದೆ 20 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಮೀಸಲಿರಿಸಲಾಗಿದೆ. ಒಟ್ಟು90  ವೆಂಟಿಲೇಟರ್‌ಗಳು ಬಡವರಿಗೆ ಸುಲಭವಾಗಿ ದೊರೆಯುತ್ತಿವೆ.

ವೆನ್ಲಾಕ್‌ನಲ್ಲಿ ಇದ್ದ 6 ಟನ್ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಈಗ 12 ಟನ್‌ಗೆ ಏರಿಕೆಯಾಗಿದೆ. ಇವೆಲ್ಲವೂ ಬಡವರಿಗಾಗಿ ಮೀಸರಿಸಲಾಗಿದೆ ಎಂದು ಶಾಸಕ ಕಾಮಾತ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Comments are closed.