ಕರಾವಳಿ

ಕೋವಿಡ್‍2ನೇ ಅಲೆ : ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್ ಖಾಯ್ದಿರಿಸಲು ಸೂಚನೆ

Pinterest LinkedIn Tumblr

ಮಂಗಳೂರು, ಎಪ್ರಿಲ್ 18:ಕೋವಿಡ್‍ನ 2ನೇ ಅಲೆಯನ್ನು ಎದುರಿಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರೊಂದಿಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರು ಸರ್ಕಾರಿ ಹಾಗೂ ಖಾಸಾಗಿ ಆಸ್ಪತ್ರೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ಕುರಿತ ಮೇಲ್ವಿಚಾರಣಾ ತಂಡಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆಯು ಏರುಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಬೆಡ್‍ಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಖಾಯ್ದಿರಿಸುವುದರೊಂದಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಸಾಮಾನ್ಯ ರೋಗಗಳಿಗೆ ಚಿಕಿತ್ಸೆಗೆ ಬರುವ ಪ್ರತಿಯೊಬ್ಬರಿಗೂ ಕೊರೋನಾ ನಿರೋಧಕ ಚುಚ್ಚು ಮದ್ದನ್ನು ಪಡೆಯಲು ಶಿಫಾರಸ್ಸು ಮಾಡುವುದರೊಂದಿಗೆ ಅವರು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಕೋವಿಡ್ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವ 800 ರೂ.ಗಳನ್ನು ಮಾತ್ರ ಪಡೆಯಬೇಕು.

ಕೆಲವು ರೋಗಿಗಳಲ್ಲಿ ಈ ಮೊತ್ತ ಭರಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತವರ ಸ್ವಾಬ್ ಟೆಸ್ಟ್ ನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ಅವುಗಳ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡುವಾಗ ಕಡ್ಡಾಯವಾಗಿ ರೋಗದ ಲಕ್ಷಣಗಳ ಬಗ್ಗೆ ನಮೂದಿಸಬೇಕು ಎಂದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಬೇಕು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಹಾಗೆ ನೋಡಿಕೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳು ಪ್ರತಿದಿನ ತಮ್ಮ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಬೆಡ್‍ಗಳು ದೊರಕುವಂತಹ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳಬೇಕು ಇವುಗಳ ನಿರ್ವಹಣೆ ಮಾಡಲು ಈಗಾಗಲೇ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಈ ಅಧಿಕಾರಿಗಳು ತಮಗೆ ನೀಡಿರುವ ಆಸ್ಪತ್ರೆಗಳ ಮೇಲ್ವಿಚಾರಣೆ ನಡೆಸಲು ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ಒಬ್ಬ ಸೋಂಕಿತ ವ್ಯಕ್ತಿಯು ಚಿಕಿತ್ಸೆ ಅಥವಾ ಔಷಧಿ ದೊರಕದೇ ಸಾವು ಉಂಟಾಗದಂತೆ ಎಚ್ಚರವಹಿಸಬೇಕು ಎಂದ ಅವರು, ಕೊರೋನ ಚಿಕಿತ್ಸೆಗೆ ಪೂರಕವಾಗುವ ಔಷಧಿ ಹಾಗೂ ಆಕ್ಸಿಜನ್ ಕೊರತೆ ಉಂಟಾದಲ್ಲಿ ಕೂಡಲೇ ಜಿಲ್ಲಾ ಡ್ರಗ್ ಕಂಟ್ರೋಲರ್ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ಕೊರೋನ ದೃಢಪಟ್ಟು ಸಾಮಾನ್ಯ ರೋಗಿಗಳು ಆಗಿದ್ದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುವುದಿಲ್ಲ. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಹೊಂದುವುದು ಅವಶ್ಯವೆಂದ ಪ್ರಕರಣಗಳಲ್ಲಿ ಮಾತ್ರ ಆಯುಷ್ಮಾನ್ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ ಈ ಬಗ್ಗೆ ಸಲಹೆ ಸೂಚನೆ ನೀಡಲು ಆರೋಗ್ಯ ಮಿತ್ರರನ್ನು ನೇಮಿಸಬೇಕು. ಇವರುಗಳ ಚಿಕಿತ್ಸೆಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ತಪ್ಪಿದಲ್ಲಿ ಕೆಪಿಎಮ್‍ಇ ಹಾಗೂ ವಿಪತ್ತು ನಿರ್ವಹಣಾ ಕಾಯಿದೆ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಚಿಕಿತ್ಸೆಗೆ ಬರಲು ತೊಂದರೆ ಇರುವ ದೂರದ ಸಾಮಾನ್ಯ ರೋಗಿಗಳಿಗೆ ಸಾಧ್ಯವಾದಷ್ಟು ಆರೋಗ್ಯ ಸಂಜೀವಿನಿ ಅಡಿಯಲ್ಲಿ ಆನ್‍ಲೈನ್ ಮೂಲಕ ಟೆಲಿಮೆಡಿಸಿನ್‍ಗಳನ್ನು ನೀಡಲು ಮುಂದಾಗಬೇಕು ಎಂದರು.

ಸೋಂಕಿತರನ್ನು ಚಿಕಿತ್ಸೆಗೆ ಕರೆತರಲು ಆಂಬುಲೆನ್ಸ್‍ಗಳು ಸುವ್ಯವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಅಲ್ಲದೇ ಖಾಸಗಿ ಆಂಬುಲೆನ್ಸ್‍ಗಳು ಸೇರಿದಂತೆ ಅವುಗಳ ಚಾಲಕರ ಮೊಬೈಲ್ ನಂಬರ್‍ಗಳ ಮಾಹಿತಿಯನ್ನು ಕ್ರೋಢಿಕರಿಸಿ ಇಟ್ಟುಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಮೇಲ್ವಿಚಾರಣೆಯನ್ನು ಮಹಾನಗರಪಾಲಿಕೆ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಯಾವುದೇ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೊನೆ ಗಳಿಗೆಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗಬಾರದು. ಹೀಗೆ ಮಾಡುವುದು ಕಂಡು ಬಂದಲ್ಲಿ ಅಂತಹ ವೈದ್ಯರ ಮೇಲೆ ವೈದ್ಯಕೀಯ ನಿರ್ಲಕ್ಷ್ಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ. ಕುಮಾರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕು ನಿರೋಧಕ ಚುಚ್ಚು ಮದ್ದು ನೀಡುವ ಸಂಖ್ಯೆಯು ಕಡಿಮೆ ಇದೆ. ಇವುಗಳನ್ನು ಹೆಚ್ಚಿಸಲು ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ರೋಗಿಗಳ ಜೊತೆ ವಿಶ್ವಾಸದೊಂದಿಗೆ ಕೈಗೊಳ್ಳಬೇಕು ಎಂದ ಅವರು ಕೊರೋನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸರಕಾರದ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಯ ರಿಪೋರ್ಟ್ 2 ದಿನದೊಳಗೆ ನೀಡಬೇಕು. ಕೆಲವೊಮ್ಮೆ 7 ದಿನದ ವರೆಗೆ ಆಗುವುದು ಕಂಡುಬರುತ್ತಿದೆ ಇದರಿಂದಾಗಿ ಕೆಲವೊಮ್ಮೆ ಸೋಂಕು ದೃಢಪಟ್ಟವರು ಇತರರಿಗೆ ಹರಡುವ ಸಾಧ್ಯತೆ ಇದೆ ಹೀಗೆ ಆಗದಂತೆ ಎಚ್ಚರ ವಹಿಸಬೇಕು ಎಂದರು
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಜಿಲ್ಲಾ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಸದಾಶಿವ ಶಾನುಭೋಗ, ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳು, ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.