ಕರಾವಳಿ

ಭಿಕ್ಷಾಟನೆಯ ಹಣದಲ್ಲಿ ಸಾಲಿಗ್ರಾಮ ದೇವಳದ ಅನ್ನದಾನ ನಿಧಿಗೆ 1ಲಕ್ಷ ನೀಡಿದ ವೃದ್ಧೆ ಅಶ್ವಥ್ಥಮ್ಮ..!

Pinterest LinkedIn Tumblr

ಉಡುಪಿ: ‘ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ…ಭೂಮಿ‌ ಮೇಲೆ ಎಲ್ಲಾ ಭಿಕ್ಷೆ ಎತ್ತುತ್ತಾರೋ’ ಎನ್ನುವ ಸಿನೆಮಾ ಹಾಡೊಂದಿದೆ. ಹಾಗೆ ಭೂಮಿ ಮೇಲೆ ಭಿಕ್ಷಾಟನೆ ಮಾಡುವ ಅದೆಷ್ಟೋ ಮಂದಿ ಇದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಭಿಕ್ಷಾಟನೆ ನಡೆಸುವ ವೃದ್ಧೆ ಅದರಲ್ಲಿ‌ ಬಂದ ಹಣವನ್ನು ಸಂಗ್ರಹಿಸಿ 1 ಲಕ್ಷ ರೂಪಾಯಿಗಳನ್ನು ಸಾಲಿಗ್ರಾಮದಲ್ಲಿರುವ ಗುರುನರಸಿಂಹ ದೇವಸ್ಥಾನಕ್ಕೆ ನೀಡಿದ್ದಾರೆ.

ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿರುವ ಅಜ್ಜಿ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅಶ್ವಥ್ಥಮ್ಮ(80) ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಳಿಯ ಕಂಚುಗೋಡು ಮೂಲದವರಾಗಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದಾರೆ. ಉಡುಪಿ ಜಿಲ್ಲೆಯ ವಿವಿದೆಡೆ ಭಿಕ್ಷಾಟನೆ ಮಾಡಿ ಸಂಗ್ರಹಿಸುವ ಹಣವನ್ನು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ದಾನವಾಗಿ ನೀಡುತ್ತಾರೆ. ತನ್ನ ಸ್ವಂತ ಕುಟುಂಬ ಬಡತನದಲ್ಲಿದ್ದರು ಹಣವನ್ನು ಉಳಿತಾಯ ಮಾಡಿ ದಾನ ಮಾಡುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಸರ್ವರಿಗೂ ಒಳಿತಾಗಬೇಕು, ಎಲ್ಲರೂ ಹಸಿವು ಮುಕ್ತರಾಗಬೇಕು. ಕೊರೊನಾ ಸೋಂಕು ದೂರವಾಗಿ ಜಗತ್ತು ಸುಭೀಕ್ಷವಾಗಬೇಕು ಎಂಬ ಪ್ರಾರ್ಥನೆಯೊಂದಿಗೆ ಅವರು ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ದಾನ ಮಾಡಿದ್ದು, ಈ ಹಣವನ್ನು ದೇವಾಲಯವು ತನ್ನ ಭಕ್ತರಿಗೆ ನೀಡುತ್ತಿರುವ ಊಟಕ್ಕೆ ಬಳಸಬೇಕೆಂದು ಅವರು ವಿನಂತಿಸಿದ್ದಾರೆ.

ಅಶ್ವಥ್ಥಮ್ಮ ಅವರು ಮುಂಜಾನೆಯಿಂದ ಸಂಜೆಯವರೆಗೆ ಭಿಕ್ಷಾಟನೆ ಮಾಡಿ ಸಂಗ್ರಹಿದ ಹಣವನ್ನು ಬ್ಯಾಂಕಿನ ದೈನಂದಿನ ಸಂಗ್ರಹ ಖಾತೆಗೆ ಕಳುಹಿಸುತ್ತಾರೆ. ಪ್ರತಿ ವರ್ಷ ಶಬರಿಮಲೆಗೆ ತೀರ್ಥಯಾತ್ರೆ ಕೈಗೊಳ್ಳುವ ಮೊದಲು, ವರ್ಷದ ಸಂಪೂರ್ಣ ಉಳಿತಾಯವನ್ನು ದೇವಸ್ಥಾನಕ್ಕೆ ಅನ್ನದಾನಕ್ಕಾಗಿ ಉಳಿತಾಯ ಮೊತ್ತ ದಾನ ಮಾಡುತ್ತಾರೆ.

ಈ ಹಿಂದೆ ಅಶ್ವಥ್ಥಮ್ಮ ಅವರು ಗಂಗೊಳ್ಳಿ ಸಮೀಪದ ಕಂಚಗೋಡು ದೇವಸ್ಥಾನಕ್ಕೆ 1.5 ಲಕ್ಷ ರೂ., ಪಂಪ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ 1.5 ಲಕ್ಷ ರೂಗಳನ್ನು ಕೂಡ ದೇಣಿಗೆ ನೀಡಿದ್ದಾರೆ. ಸಾಲಿಗ್ರಾಮ ದೇವಸ್ಥಾನಕ್ಕೆ ದೇಣಿಗೆಯನ್ನು ಹಸ್ತಾಂತರಿಸಿದಾಗ ಸಾಲಿಗ್ರಾಮ ದೇವಾಲಯದ ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ.ನಾಗರಾಜ ಅವರು ದೇವರ ಪ್ರಸಾದ ನೀಡಿ ಗೌರವಿಸಿದರು.

ಅಶ್ವಥ್ಥಮ್ಮ ದೇಶಾದ್ಯಂತ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದು, ಈಗಾಗಲೇ ಈ ವರ್ಷ ಅಯ್ಯಪ್ಪ ಮಾಲಾ ಧರಿಸಿದ್ದಾರೆ ಮತ್ತು ಫೆಬ್ರವರಿ 9 ರಂದು ಸಾಲಿಗ್ರಾಮ ದೇವಸ್ಥಾನದಲ್ಲಿ ತೀರ್ಥಯಾತ್ರೆಗೆ ತಮ್ಮ ಇರುಮುಡಿಯನ್ನು ಕಟ್ಟಲಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.