ಕರಾವಳಿ

ಕೊಲ್ಲೂರು ಶ್ರೀ ವೀರಭದ್ರ ದೇವರ ಸನ್ನಿಧಿ ಶಿಲಾಮಯ; ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಂದ ಸಂಕಲ್ಪ ಪೂಜೆ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಶ್ರೀ ವೀರಭದ್ರ ದೇವರ ಸನ್ನಿಧಾನವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಶಿಲಾಮಯ ದೇಗುಲವನ್ನು ನಿರ್ಮಾಣ ಮಾಡಲು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ನೆರವೇರಿಸಿದರು.

ದೇವಸ್ಥಾನದ ಆವರಣದಲ್ಲಿ ಇರುವ ಶ್ರೀ ವೀರಭದ್ರ ದೇವರ ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಿ ಶಿಲಾಮಯ ದೇಗುಲವನ್ನು ನಿರ್ಮಿಸುವ ಕುರಿತು ಹಿಂದಿನ ಆಡಳಿತ ಮಂಡಳಿ, ಸರ್ಕಾರದ ಒಪ್ಪಿಗೆಯೊಂದಿಗೆ ತೀರ್ಮಾನ ಕೈಗೊಂಡಿತ್ತು. ಉದ್ದೇಶಿತ ಮಂದಿರ ನಿರ್ಮಾಣಕ್ಕಾಗಿ ಕೃಷ್ಣಮೂರ್ತಿ ಮಂಜರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಶ್ರೀ ದೇಗುಲದ ಭಕ್ತರು ಅಪೇಕ್ಷೆ ವ್ಯಕ್ತಪಡಿಸಿದ್ದರು. ಸ್ಥಳೀಯರಾದ ಪ್ರಸ್ತುತ ಹೈದರ್‌ಬಾದ್‌ನಲ್ಲಿ ಹೋಟೇಲ್‌ ಉದ್ಯಮಿಯಾಗಿರುವ ಮಂಜರಿಗೆ ದೇಗುಲದ ನಿರ್ಮಾಣ ಅವಕಾಶ ದೊರೆಕಿದೆ.

ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಾಣಗೊಳ್ಳಲಿರುವ ದೇಗುಲದ ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಮುಕ್ತಾಯಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಅನಾದಿ ಕಾಲದಿಂದ ಪೂಜಿಸಿಕೊಂಡು ಬರುತ್ತಿರುವ ಶ್ರೀ ವೀರಭದ್ರ ದೇವರ ಪೂಜಾ ಕಾರ್ಯಗಳಿಗೆ ಹಾಗೂ ಪ್ರಸ್ತುತ ಇರುವ ಗರ್ಭಗುಡಿಗೆ ಯಾವುದೆ ಚ್ಯುತಿ ಬಾರದಂತೆ ದೇಗುಲ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಹಿಂದಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯ ವಂಡಬಳ್ಳಿ ಜಯರಾಮ್‌ ಶೆಟ್ಟಿ ತಿಳಿಸಿದ್ದಾರೆ.

ದೇವಸ್ಥಾನದ ಅರ್ಚಕರಾದ ಮೂರ್ತಿ ಕಾಳಿದಾಸ್‌ ಭಟ್‌ ಹಾಗೂ ನರಸಿಂಹ ಭಟ್ ಅವರ ಮಾರ್ಗದರ್ಶನದಲ್ಲಿ ಶ್ರೀ ವೀರಭದ್ರ ದೇವರ ಸನ್ನಿಧಿಯ ಮುಂಭಾಗದಲ್ಲಿ ದೇಗುಲ ನಿರ್ಮಾತೃರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಶಾಂತಾ ಕೃಷ್ಣಮೂರ್ತಿ ಮಂಜ ದಂಪತಿಗಳು ದೇಗುಲ ನಿರ್ಮಾಣ ಸಂಕಲ್ಪ ಪೂಜೆಯ ವಿಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್‌, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್‌ ಶೆಟ್ಟಿ, ರಮೇಶ್‌ ಗಾಣಿಗ ಕೊಲ್ಲೂರು ಇದ್ದರು.

Comments are closed.