ಕರಾವಳಿ

ವೈಭವದ “ಮಂಗಳೂರು ದಸರಾ ಮಹೋತ್ಸವ” ಸಂಪನ್ನ : ಶೋಭಾಯಾತ್ರೆ ಇಲ್ಲದಿದ್ದರೂ ಕ್ಷೇತ್ರಕ್ಕೆ ಹರಿದು ಬಂದ ಜನಸಾಗಾರ

Pinterest LinkedIn Tumblr

ಮಂಗಳೂರು, ಆಕ್ಟೋಬರ್.27: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ “ಮಂಗಳೂರು ದಸರಾ ಮಹೋತ್ಸವ”ದ ಸೋಮವಾರ ಸಂಪನ್ನಗೊಂಡಿತ್ತು.

“ದಸರಾ ಮಹೋತ್ಸವ” ಪ್ರಯುಕ್ತ ಶ್ರೀ ಕ್ಷೇತ್ರದ ದರ್ಬಾರು ಮಂಟಪದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣಪತಿ, ನವದುರ್ಗೆ, ಆದಿಶಕ್ತಿ ಹಾಗೂ ಶ್ರೀ ಶಾರದೆ ಮಾತೆಯನ್ನು ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜನೆ ಮಾಡುವ ಮೂಲಕ ವೈಭವದ “ಮಂಗಳೂರು ದಸರಾ ಮಹೋತ್ಸವ”ಕ್ಕೆ ತೆರೆ ಬಿತ್ತು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆ ಇಲ್ಲದೆ ಮಂಗಳೂರು ದಸರಾ ಸಂಪನ್ನಗೊಂಡಿತು.

ಸಂಜೆ 6.30ಕ್ಕೆ ವಿಸರ್ಜನಾ ಪೂಜೆ ನಡೆದು ಬಳಿಕ 8.30 ರಿಂದ ಗಣಪತಿ,ಆದಿಶಕ್ತಿ ನವದುರ್ಗೆಯರ ಮಣ್ಣಿನ ಮೂರ್ತಿಗಳನ್ನು ಕ್ಷೇತ್ರಕ್ಕೆ ಒಂದು ಪ್ರದಕ್ಷಿಣೆ ಹಾಕಿ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ಮಧ್ಯರಾತ್ರಿ 12 ಗಂಟೆಗೆ ಶಾರದಾ ಮಾತೆಯ ಮೂರ್ತಿಯನ್ನು ಕೇತ್ರದ ಮುಖ್ಯದ್ವಾರದವರೆಗೂ ಮೆರವಣಿಗೆಯಲ್ಲಿ ಕೊಂಡೊಯ್ಯದ್ದು ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಕ್ಷೇತ್ರದ ದೇವರುಗಳಾದ ಗೋಕರ್ಣನಾಥ ಹಾಗೂ ಅನ್ನಪೂರ್ಣೇಶ್ವರಿಯ ಬಲಿ ಮೂರ್ತಿಯ ಅವಭೃತ ಸ್ನಾನ ನಡೆಯಿತು,

ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮಾತೆಗೆ ಪೂಜೆ ಸಲ್ಲಿಸಿ ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ಪುಷ್ಕರಣಿಯಲ್ಲಿ ಶಾರದಾ ಮಾತೆಯ ಮೂರ್ತಿಯನ್ನು ವಿಸರ್ಜಿಸಲಾಯಿತು.ಈ ಮೂಲಕ ಈ ಬಾರಿಯ ಮಂಗಳೂರು ಸರಳ ದಸರಾ ಸಂಪನ್ನಗೊಂಡಿತು.

ರಾಜ್ಯದಲ್ಲೇ ಮೈಸೂರು ಬಿಟ್ಟರೆ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾ ಮೆರವಣಿಗೆ ಇಲ್ಲದೆ ನವದುರ್ಗೆಯರ ವಿಸರ್ಜನೆ ಕುದ್ರೋಳಿ ದೇಗುಲದ ಪುಷ್ಕರಣಿಯಲ್ಲಿ ನಡೆದಿದೆ.

ಶಾರದಾ ಮಾತೆ ಸೇರಿದಂತೆ ನವದುರ್ಗೆಯರು ಹಾಗೂ ಗಣಪತಿಯ ಅಲಂಕೃತ ಮೂರ್ತಿಯನ್ನು ದೇಗುಲದ ಹೊರಾಂಗಣದಲ್ಲಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಪ್ರದಕ್ಷಿಣೆ ಹಾಕಿ ಪುಷ್ಕರಣಿಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕೋವಿಡ್ ಗೈಡ್‌ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿಸಲಾಯಿತು. ಈ ಹಿಂದಿನ ವರ್ಷಗಳಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಭವ್ಯ ಶೋಭಾಯಾತ್ರೆ ನಡೆಯುತ್ತಿತ್ತು.

ರಾತ್ರಿ ಪೂರ್ತಿ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ಕುದ್ರೋಳಿ ಶ್ರೀ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹಾಗೂ ಶ್ರೀ ಕ್ಷೇತ್ರದಕೋಶಾಧಿಕಾರಿ ಪದ್ಮರಾಜ್ ಆರ್ (ಆಡ್ವಕೇಟ್) ಅವರ ನೇತ್ರತ್ವದಲ್ಲಿ ಕಾರ್ಯಕ್ರಮಗಳು ನಡೆದವು.
ಶ್ರೀ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿಗಳಾದ ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಡಾ. ಬಿ.ಜಿ. ಸುವರ್ಣ, ರಾಜೇಂದ್ರ ಆದರ್ಶ ನಗರ ಹಾಗೂ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.