ಕರಾವಳಿ

ಪೂಜಾರಿಯವರ ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣ ಕನಸಿಗೆ ಬೆನ್ನೆಲುಬಾದವರು ಜಯ ಸಿ.ಸುವರ್ಣ

Pinterest LinkedIn Tumblr

 

ಮಂಗಳೂರು, ಆಕ್ಟೋಬರ್.21 : ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾದ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ ಅವರು ಪೂಜಾರಿಯವರ ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣ ಕನಸಿಗೆ ಬೆನ್ನೆಲುಬಾಗಿದ್ದರು.

ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಮುಂಬೈ ಬಿಲ್ಲವ ಭವನದ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹತ್ತು ಹಲವಾರು ಕೊಡುಗೆಗಳನ್ನು ನೀಡಿದವರು. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣದ ಕನಸ್ಸಿಗೆ ಬೆಂಬಲವಾಗಿ ನಿಂತವರು.

ಮುಂಬೈ ಗುಜರಾತ್ ಸೇರಿದಂತೆ ದೇಶ ವಿದೇಶಗಳ ಬಿಲ್ಲವರನ್ನು ಸಂಪರ್ಕಿಸಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ಜನಾರ್ದನ ಪೂಜಾರಿಯವರ ಕನಸ್ಸಿನ ಯೋಜನೆ ಶ್ರೀ ಕ್ಷೇತ್ರದ ನವೀಕರಣ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮುಂಬೈ ಬಿಲ್ಲವರ ಅಸೋಸಿಯೇಶನ್ ಹಿರಿಯರಿಂದ ಸ್ಪಾಪಿತವಾದ ಭಾರತ್ ಕೋ- ಅಪರೇಟಿವ್ ಬ್ಯಾಂಕಿನ ಚುಕ್ಕಾಣಿ ಹಿಡಿದು ಆಗ ಕೇವಲ 5 ಶಾಖೆಗಳಿದ್ದ ಅದನ್ನು ಜನಾರ್ದನ ಪೂಜಾರಿಯವರ ಬೆಂಬಲದೊಂದಿಗೆ ಇಂದು 100ಕ್ಕೂ ಅಧಿಕ ಶಾಖೆಗಳ ವಿಸ್ತರಣೆಯೊಂದಿಗೆ ಸಮಾಜದ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ಸಾಲದ ಮೂಲಕ ಆರ್ಥಕ ಶಕ್ತಿ ನೀಡಿ ಅವರ ವ್ಯವಹಾರಕ್ಕೆ ನೆರವಾದ ಜಯ ಸಿ ಸುವರ್ಣರ ಇಚ್ಛಾಶಕ್ತಿಯಿಂದಾಗಿ ಇಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದೆ.

ತಿಳಿದು ಬರೋದು ಜನನ…. ತಿಳಿಯದೆ ಬರೋದು ಮರಣ…. ತಿಳಿದು ಬದುಕುವುದೇ ಜೀವನ..ಇವರೇ ಸಾರ್ಥಕ ಬದುಕಿನ ನಮ್ಮ ಜಯ ಸಿ ಸುವರ್ಣ. ಬದುಕಿನುದ್ದಕ್ಕೂ ಜಗತ್ತಿನಲ್ಲಿ ಸ್ರಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುತ್ತಾ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶ ಗಳನ್ನು ಪಾಲಿಸುತ್ತಾ, ಕೂಡಿ ಬಾಳಿ, ದಾನ ಮಾಡಿ ಮಾಡಿ, ಕೊಟ್ಟು ಕೊಟ್ಟು ಹಿಗ್ಗದೇ ಸರ್ವ ಸಮಾಜದ ಒಬ್ಬ ಮಹಾನ್ ಜನನಾಯಕರಾಗಿದ್ದರು.

ಗೋರೆಗಾವ್‌‌ನ ಜಯಪ್ರಕಾಶ್ ಹೋಟೆಲ್ ಮಾಲೀಕ, ಭಾರತ್ ಬ್ಯಾಂಕ್ ನ ಅಭಿವೃದ್ಧಿ ರೂವಾರಿ, ಮಾಜಿ ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮಾಜಿ ಅಧ್ಯಕ್ಷರು, ಮಾರ್ಗ ದರ್ಶಕರು, ಬಿಲ್ಲವರ ಮಹಾ ಮಂಡಲದ ಮಾಜಿ ಅಧ್ಯಕ್ಷರು, ಕುದ್ರೋಳಿ ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೇನೇ ಸಾಯಿ ವೆಜ್ ಹೋಟೆಲ್ ಗ್ರೂಪ್ನ ಸ್ಥಾಪಕರು ಆದ ಸಂಘಟಕರಾಗಿದ್ದ ಅವರು ಜನನಾಯಕರಾಗಿದ್ದರು.

Comments are closed.