ಕರಾವಳಿ

ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಾಥ್ಯದಲ್ಲಿ ನೂತನ ಮೇಳ : ನೂರಕ್ಕೂ ಹೆಚ್ಚು ಪ್ರದರ್ಶನ ಬುಕ್ಕಿಂಗ್

Pinterest LinkedIn Tumblr

ಮಂಗಳೂರು: ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇದರ ಹೆಸರಿನಲ್ಲಿ ನೂತನ ಯಕ್ಷಗಾನ ಮಂಡಳಿಯು ಅಕ್ಟೋಬರ್ 26 ವಿಜಯದಶಮಿ ಯಂದು ಯಕ್ಷಗಾನ ಪ್ರದರ್ಶನದ ಉದ್ಘಾಟನೆ ನೆರವೇರಲಿದ್ದು, ನವಂಬರ್ 27ರಿಂದ ತಿರುಗಾಟ ಪ್ರಾರಂಭಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮೋಕ್ತೇಸರ ಎಂ.ಶಶೀಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪುರಾತನ ಕಾಲದಿಂದಲೂ ಯಾಗ ಭೂಮಿಯೆಂದೇ ಪ್ರಸಿದ್ಧಿ ಪಡೆದ, ಮಹಾ ಮಹಾ ಯಾಗಗಳು ಯಶಸ್ವಿಯಾಗಿ ಸಂಪನ್ನಗೊಂಡ ಈ ಪುಣ್ಯ ಕ್ಷೇತ್ರದಲ್ಲಿ ಸುಮಾರು ಇನ್ನೂರು ವರ್ಷಗಳ ಹಿಂದೆಯೂ ಪ್ರಸಿದ್ಧ ಯಕ್ಷಗಾನ ಮೇಳ ಇದ್ದ ಬಗ್ಗೆ ಇತಿಹಾಸವಿದೆ.

ಇದರ ಮುಂದುವರಿಕೆಯಾಗಿ ಯಕ್ಷಗಾನದ ಎಲ್ಲಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ಶ್ರೀದೇವರ ದಿವ್ಯ ಸಂಕಲ್ಪವೆಂದೇ ನಮ್ಮ ಭಾವನೆಯಿದ್ದು, ಸುಬ್ರಹ್ಮಣ್ಯ ಸ್ವಾಮಿಯ ಆರಾಧನಾ ಪೂರ್ವಕ ಸೇವೆಗಾಗಿಯೇ ಮುಡಿ ಪಾಗಿರುತ್ತದೆ. ತನ್ಮೂಲಕ ಸಮಾಜದಲ್ಲಿ ಉತ್ತಮ ಜ್ಞಾನ ಪದರಸಾರದ ಉದ್ದೇಶವೂ ಇರುತ್ತದೆ ಎಂದು ಅವರು ತಿಳಿಸಿದರು.

ನೂತನ ಮೇಳದ ತಿರುಗಾಟವು 27-11-2020ರಿಂದ ಆರಂಭಗೊಳ್ಳ ಲಿದ್ದು, ಈಗಾಗಲೇ ಸುಮಾರು ಒಂದು ನೂರಕ್ಕೂ ಮಿಕ್ಕಿ ಸೇವಾರ್ಥಿಗಳು ಪಾವಂಜೆ ಯಕ್ಷಗಾನ ಮಂಡಳಿಯ ಪ್ರದರ್ಶನವನ್ನು ಕಾದಿರಿಸಿದ್ದಾರೆ.

ನೂತನ ಯಕ್ಷಗಾನ ಮಂಡಳಿ ಯಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು, ಪ್ರಧಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರ ಸೂತ್ರಧಾರಿಕೆಯಲ್ಲಿ ಪ್ರದರ್ಶನವನ್ನು ಕಳೆಗಟ್ಟಿಸಲಿದ್ದಾರೆ.

ಯಕ್ಷಗಾನದ ಆಖ್ಯಾಯಿಕೆಯ ಪ್ರದರ್ಶನ, ಅದಕ್ಕೆ ಬೇಕಾದ ಸೂಕ್ತ ಕಲಾವಿದರ ಆಯ್ಕೆ ಹಾಗೂ ರಂಗ ಪ್ರಸ್ತುತಿ ಇತ್ಯಾದಿ ವಿಷಯಗಳಲ್ಲಿ ಪ್ರಧಾನ ಭಾಗವತರಿಗೆ ಪೂರ್ಣ ಜವಾಬ್ದಾರಿ ಯನ್ನು ವಹಿಸಿಕೊಡಲಾಗಿದ್ದು, ಮಂಡ ಳಿಯ ಸಂಘಟನೆ, ಆರ್ಥಿಕ ನಿರ್ವಹಣೆ, ನೀತಿ ನಿರೂಪಣೆ ಮತ್ತು ಆಡಳಿತ ಸಂಪೂರ್ಣವಾಗಿ ಶ್ರೀಕ್ಷೇತ್ರದ್ದಾಗಿರು ತ್ತದೆ ಎಂದು ಎಂ. ಶಶೀಂದ್ರ ಕುಮಾರ್ ತಿಳಿಸಿದರು.

ಈ ಯಕ್ಷಗಾನ ಮಂಡಳಿಯಲ್ಲಿ ಪ್ರಧಾನ ಕಲಾವಿದರಾಗಿ ಪಟ್ಲ ಸತೀಶ ಶೆಟ್ಟಿ, ಪ್ರಪುಲ್ಲಚಂದ್ರ ನೆಲ್ಯಾಡಿ, ಪದ್ಮನಾಭ ಉಪಾಧ್ಯಾಯ, ಗುರು ಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ ಆಚಾರ್ಯ, ಹಾಸ್ಯ ಪಾತ್ರಧಾರಿಗಳಾಗಿ ಉಜಿರೆ ನಾರಾಯಣ, ಹಾಗೂ ಸಂದೇಶ ಮಂದಾರ, ಸ್ತ್ರೀ ಪಾತ್ರಧಾರಿಗಳಾಗಿ ಅಕ್ಷಯಕುಮಾರ್, ರಾಜೇಶ ನಿಟ್ಟೆ, ಯೋಗೇಶ ಕಡಬ, ವಿಶ್ವಾಸ್ ಕಾವೂರು ಹಾಗೂ ಪ್ರಧಾನ ಪಾತ್ರದಲ್ಲಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ ಅಡ್ಕ, ಸತೀಶ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷ್ಮಣ, ಮಧುರಾಜ್, ಭುವನ್ ಹಾಗೂ ಇತರರು ಕಾರ್ಯನಿರ್ವಹಿಸಲಿದ್ದಾರೆ.

ಯಕ್ಷಗಾನ ಪ್ರದರ್ಶನವು ಕಾಲ ಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಾಯಂಕಾಲ 6 ಗಂಟೆಯಿಂದ ರಾತ್ರಿಯ 11ರ ಅವಧಿಯಲ್ಲಿ ಸೇವಾ ದಾರರು/ಭಕ್ತಾದಿಗಳು ಇಚ್ಛಿಸುವ ಯಾವುದೇ ಪೌರಾಣಿಕ ಪ್ರಸಂಗಗಳನ್ನು ನಮ್ಮ ಕಲಾವಿದರು ಆಡಿ ತೋರಿಸಲಿದ್ದಾರೆ. ಈ ಎಲ್ಲಾ ಪ್ರದರ್ಶ ನಗಳನ್ನು ಕೋವಿಡ್-19ರ ಪರಿಸ್ಥಿತಿ ಯಲ್ಲಿ ಸರಕಾರ ಕಾಲ ಕಾಲಕ್ಕೆ ನೀಡುವ ನಿರ್ದೇಶನಗೊಳಪಟ್ಟು ನಡೆಸಲಾಗುವುದು ಎಂದರು.

ಮತ್ತಷ್ಟು ಕಲಾವಿದರ ಸೇರ್ಪಡೆ:

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹೊಸದಾಗಿ ಯಕ್ಷಗಾನ ಮೇಳ ಆರಂಭಿಸಿರುವುದು ದೊಡ್ಡ ಸಾಹಸದ ಪ್ರಯತ್ನವಾಗಿದೆ. ಅನೇಕ ಕಲಾವಿದರು ಪಾವಂಜೆ ಮೇಳಕ್ಕೆ ಸೇರ್ಪಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರು ಮೇಳಕ್ಕೆ ಸೇರಲಿದ್ದಾರೆ. ಪಾವಂಜೆ ಕ್ಷೇತ್ರ ಮಹಾತ್ಮೆ ಯಕ್ಷಗಾನ ಈಗಾಗಲೇ ರಚನೆಯಾಗಿದೆ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ವರ್ಷದ ಎಲ್ಲಾ ದಿನಗಳಲ್ಲಿಯೂ ಸೇವೆ ಸಲ್ಲಿಸಲು ಅವಕಾಶವಿದ್ದು, ಶ್ರೀ ಸುಬ್ರಹ್ಮಣ್ಯ ದೇವರ ಸೇವಾದಾರರು ಮಾಹಿತಿಗಾಗಿ ಈ ಮೊಬೈಲ್ ನಂಬ್ರವನ್ನು ಸಂಪರ್ಕಿಸಬಹುದಾಗಿದೆ:9483814168 ಅಥವಾ9900371441

ಪತ್ರಿಕಾಗೋಷ್ಠಿಯಲ್ಲಿ ಪಾವಂಜೆ ದೇವಸ್ಥಾನದ ಧರ್ಮದರ್ಶಿ ಡಾ. ಯಾಜಿ ನಿರಂಜನ್ ಭಟ್ ಉಪಸ್ಥಿತರಿದ್ದರು.

Comments are closed.