ಕರಾವಳಿ

ದ.ಕ.ಜಿಲ್ಲೆ : ಜನನ ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಕಡ್ಡಾಯ

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 19: ಜಿಲ್ಲೆಯಲ್ಲಿ ಜನನ ಮರಣ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಡಿಜಿಟಲ್ ಸಹಿಯ ಮುಖಾಂತರ ವಿತರಣೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ ಜೆ. ರೂಪ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನನ ಮರಣ ನೋಂದಣಿ ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು ನೋಂದಣಾಧಿಕಾರಿಗಳಾಗಿದ್ದು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಜಿಲ್ಲಾ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯಾಧಿಕಾರಿ ಉಪನೋಂದಣಾಧಿಕಾರಿ ಯಾಗಿದ್ದಾರೆ. ಇನ್ನು ಮಹಾನಗರಪಾಲಿಕೆಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ನೋಂದಣಾಧಿಕಾರಿ ಯಾಗಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿದ್ದು, ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸರ್ಕಾರಿ ಆಸ್ಪತ್ರಗಳಲ್ಲಿ ಸರ್ಕಾರಿ ವೈದ್ಯರು ಉಪನೋಂದಣಾಧಿಕಾರಿಗಳಾಗಿದ್ದು ಇವರುಗಳು ಡಿಜಿಟಲ್ ‘ಕೀ’ ಯನ್ನು ಅಳವಡಿಸಿಕೊಳ್ಳಬೇಕು. ಕಡ್ಡಾಯವಾಗಿ ಡಿಜಿಟಲ್ ಸಹಿಯ ಮುಖಾಂತರ ಜನನ ಮರಣ ಪ್ರಮಾಣ ಪತ್ರಗಳನ್ನು ನೀಡಬೇಕು. ಆದಷ್ಟು ಹಸ್ತ ಸಹಿಯನ್ನು ಕಡಿಮೆಗೊಳಿಸಬೇಕು ಎಂದು ಸೂಚಿಸಿದರು.

ಸರ್ಕಾರದ ಆದೇಶದ ಪ್ರಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳಾಗಿ ನೇಮಿಸಿದ್ದು, ಈ ಬಗ್ಗೆ ತಾಲೂಕು ಮಟ್ಟದಲ್ಲಿ ಎಲ್ಲಾ ಪಿ.ಡಿ.ಓಗಳಿಗೆ ಸೂಕ್ತ ತರಬೇತಿ ಜೊತೆಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅವರು ಹೇಳಿದರು.

ಅಂಕಿ ಅಂಶದ ಪ್ರಕಾರ ಈಗಾಗಲೇ ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಜನನ ಮರಣ ಪ್ರಮಾಣ ಪತ್ರ ತಡನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ತಾಲೂಕಿನ ತಹಶೀಲ್ದಾರ್‍ಗಳು ನೋಂದಣಾಧಿಕಾರಿ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಎಂದರು. ಪ್ರತೀ ತಾಲೂಕಿನಲ್ಲಿ ಸಮನ್ವಯ ಸಮಿತಿ ಸಭೆ ಕರೆದು ತಡವಾಗಿ ನೋಂದಣಿಯಾಗಿರುವ ಕುರಿತು ಚರ್ಚೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಾಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡಾ 100 ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ ಹಾಗೂ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.

2020ನೇ ಸಾಲಿನ ಜನವರಿಯಿಂದ ಆಗಸ್ಟ್ ವರೆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯ ನಗರ ಹಾಗೂ ಗ್ರಾಮಾಂತರಗಳಲ್ಲಿ 18,824 ಜನನ ಪ್ರಮಾಣ ಪತ್ರ ನೋಂದಣಿಯಾಗಿದ್ದು, 10,139 ಮರಣ ಪ್ರಮಾಣ ಪತ್ರ ನೋಂದಣಿಯಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉದಯ್ ಶೆಟ್ಟಿ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮದನ್ ಮೋಹನ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.