ಕರಾವಳಿ

ಬಡವರ ಹಸಿವು ನೀಗಿಸುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ : ದ.ಕ. ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳ ಜತೆಗಾರರು ಹಲವು ಬಾರಿ ಸೇವಿಸಲು ಆಹಾರವಿಲ್ಲದೆ ಒದ್ದಾಡುತ್ತಿರುತ್ತಾರೆ. ರೋಗಿಯ ಊಟವನ್ನೇ ಇಬ್ಬರು ಹಂಚಿ ತಿನ್ನುವ ಅನಿವಾರ್ಯತೆ ಇರುತ್ತದೆ. ಬಡ ರೋಗಿಗಳ ಜತೆಗಾರರ ಹಸಿವು ನೀಗಿಸುವ ಕಾಯಕವನ್ನು ಎಂ.ಫ್ರೆಂಡ್ಸ್ ತಂಡ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿಯ ಉಚಿತ ಭೋಜನ ನೀಡುವ ಕಾರುಣ್ಯ ಯೋಜನೆಯ ಸಾವಿರ ದಿನಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರು ಕಾಯಿಲೆ ಬಂದು ಆಸ್ಪತ್ರೆಗೆ ಹೋದರೆ, ನೋವು ತಿನ್ನುವ ಜತೆಗೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಅದರಲ್ಲೂ ಬಡವರಿಗೆ ಕಾಯಿಲೆ ಬಂದರೆ ಅವರ ಪರಿಸ್ಥಿತಿ ಶೋಚನೀಯ ಎಂದು ಜಿಲ್ಲಾಧಿಕಾರಿಗಳು ಖೇದ ವ್ಯಕ್ತಪಡಿಸಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೌದಿ ಅರೇಬಿಯಾದ ಉದ್ಯಮಿ ಶರೀಫ್ ವೈಟ್‍ಸ್ಟೋನ್, ಐಎಂಎ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಉಪಸ್ಥಿತರಿದ್ದರು.

ಸಾವಿರ ದಿನಗಳಲ್ಲಿ ಯಾವುದೇ ರಜೆ ತೆಗೆದುಕೊಳ್ಳದೆ ಪ್ರತಿದಿನ ಕಾರುಣ್ಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಎಂಫ್ರೆಂಡ್ಸ್ ಸಿಬ್ಬಂದಿ ಅಶ್ಫಾಕ್ ಮತ್ತು ಕ್ಯಾಟರಿಂಗ್ ಮಾಲೀಕ ಸೌಹಾನ್ ಎಸ್.ಕೆ. ಅವರನ್ನು ಅಭಿನಂದಿಸಲಾಯಿತು.

ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಬೂಬಕರ್ ವಂದಿಸಿದರು.

Comments are closed.