ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಕನ್ನಡದಲ್ಲಿ ಎಸ್‌ಎಂಎಸ್ ಕಳುಹಿಸಿದ ಘಟನೆ ಬುಧವಾರ ಅಪರಾಹ್ನ ನಡೆದಿದ್ದು, ಸಂಪೂರ್ಣ ತಪಾಸಣೆಯ ಬಳಿಕ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದೆ,
ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ ಅವರಿಗೆ ಈ ಕರೆ ಬಂದಿದ್ದು, ಅವರು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ನಿಲ್ದಾಣದ ಸಿಐಎಸ್‌ಎಫ್ ಸಿಬಂದಿ ಮತ್ತು ಪೊಲೀಸರು ಇಡೀ ನಿಲ್ದಾಣ ಪೂರ್ತಿ ತಪಾಸಣೆ ನಡೆಸಿದ್ದಾರೆ. ಎಲ್ಲೂ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಕರೆ ಎನ್ನುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದು, ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಂ.ಆರ್. ವಾಸುದೇವ ಅವರ ಮೊಬೈಲ್‌ಗೆ ನಿನ್ನೆ ಅಪರಾಹ್ನ 12.44ಕ್ಕೆ ‘ಏರ್‌ಪೋರ್ಟ್‌ನಲ್ಲಿ ಬಾಂಬ್ ಇದೆ ಎಂದು ಇಂಗ್ಲೀಷ್ ಅಕ್ಷರದಲ್ಲಿ ಕನ್ನಡದಲ್ಲಿ ಸಂದೇಶ (ಎಸ್‌ಎಂಎಸ್) ಬಂದಿತ್ತು. ಬಳಿಕ, ಮತ್ತೆ ಅದೇ ಸಂದೇಶವನ್ನು 12.51ಕ್ಕೆ ಬಂದಿತ್ತು.
ಬಳಿಕ ಅ ವ್ಯಕ್ತಿ ಸುಮಾರು 1 ಗಂಟೆ ವೇಳೆಗೆ ಅದೇ ಸಂಖ್ಯೆಯಿಂದ ಕರೆ ಮಾಡಿದ್ದು, ಇದು ಏರ್‌ಪೋರ್ಟಾ ಎಂದು ಕನ್ನಡದ ಪ್ರಶ್ನಿಸಿದ್ದ. ಅಲ್ಲ ಎಂದಾಗ ಹಾಗಾದರೆ ಫೋನ್ ಇಡು ಎಂದು ಏಕವಚನದಲ್ಲಿ ಆಕ್ರೋಷ ಭರಿತನಾಗಿ ಉತ್ತರ ನೀಡಿ ಕರೆ ಕಟ್ ಮಾಡಿದ್ದ. ತತ್‌ಕ್ಷಣ ತಾನು ನಿಲ್ದಾಣದ ನಿರ್ದೇಶಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಪೊಲೀಸ್ ಅಧಿಕಾರಿಗಳು ನನ್ನಿಂದ ಸಂಪೂರ್ಣ ಮಾಹಿತಿ ಪಡೆದರು. ಆ ಸಂಖ್ಯೆಯನ್ನೂ ಅವರಿಗೆ ನೀಡಿದ್ದೇನೆ ಎಂದು ಎಂ.ಆರ್. ವಾಸುದೇವ ಅವರು ತಿಳಿಸಿದ್ದಾರೆ.
ಪ್ರಕರಣದ ಕುರಿತಂತೆ ಈಗಾಗಲೇ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನ ಬಳಿ ಇರುವ ಮೊಬೈಲ್ ಫೋನ್, ಎಸ್‌ಎಂಎಸ್ ಕಳುಹಿಸಿದ ಮತ್ತು ಕರೆ ಬಂದ ಮೊಬೈಲ್ ಫೋನ್‌ನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments are closed.