ಕರಾವಳಿ

ಪ್ರಯೋಗಶಾಲಾ ಪರೀಕ್ಷಾ ಫಲಿತಾಂಶ ನಿಖರ : ಪಾಸಿಟಿವ್ ಬಂದು ರೋಗ ಲಕ್ಷಣಗಳು ಇಲ್ಲದಿದ್ದಲ್ಲಿ ಮನೆಯಲ್ಲೇ ಚಿಕಿತ್ಸೆ

Pinterest LinkedIn Tumblr

ಮಂಗಳೂರು ಆಗಸ್ಟ್ 11 : ಕೋವಿಡ್-19 ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಶೀಘ್ರ ಕೋವಿಡ್ ಪ್ರಕರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಹಾಗೂ ಖಚಿತ ಪ್ರಕರಣಗಳ ಸಂಪರ್ಕದಲ್ಲಿರುವವರ ಸೋಂಕು ಪತ್ತೆ ಹಚ್ಚುವಿಕೆ ಮತ್ತು ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ದೃಷ್ಠಿಯಿಂದ ಕೋವಿಡ್ ಪರೀಕ್ಷಾ ವಿಧಾನಗಳನ್ನು ತೀವ್ರಗೊಳಿಸಲಾಗಿದೆ.

ಕೋವಿಡ್-19 ಪ್ರಯೋಗಶಾಲಾ ಪರೀಕ್ಷಾ ವಿಧಾನಗಳಲ್ಲಿ 2 ವಿಧಾನ;-

1. A Rapid Antigen Test –  ತ್ವರಿತ ಪ್ರತಿಜನಕ ಪರೀಕ್ಷೆ

2. RT-PCR – ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್

ರ್‍ಯಾಪಿಡ್ ಟೆಸ್ಟ್- ಯಾವುದೇ ವ್ಯಕ್ತಿಯಲ್ಲಿ ಸೋಂಕಿತ ಲಕ್ಷಣಗಳು ಇರಲಿ, ಇಲ್ಲದಿರಲಿ ಕೂಡಲೇ ಆಂಟಿಜೆನ್ ಕಿಟ್ ಸಲಕರಣೆಯ ಮೂಲಕ ತ್ವರಿತ ಪತ್ತೆಗಾಗಿ ಇದನ್ನು ಉಪಯೋಗಿಸಲಾಗುತ್ತಿದೆ. ಈ ವಿಧಾನದಲ್ಲಿ ಮೂಗಿನ ಸ್ರಾವವನ್ನು ತೆಗೆದು ಈ ಕಿಟ್‍ನ ಮೂಲಕ ಪರೀಕ್ಷೆಗೊಳಪಡಿಸಿದಾಗ 15 ರಿಂದ 20 ನಿಮಿಷದ ಅವಧಿಯಲ್ಲಿ ಫಲಿತಾಂಶ ಬರುತ್ತದೆ.

ಈ ಪರೀಕ್ಷಾ ವಿಧಾನದಲ್ಲಿ ಪಾಸಿಟಿವ್ ಬಂದಲ್ಲಿ ಅದನ್ನು ಖಚಿತ ಪ್ರಕರಣವೆಂದು ಪರಿಗಣಿಸಲಾಗುವುದು. ನೆಗೆಟಿವ್ ಬಂದಲ್ಲಿ, ಕೆಲವೊಂದು ವ್ಯಕ್ತಿಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಪುನಃ ಅವರ ಗಂಟಲು ಸ್ರಾವ ಮಾದರಿ ಹಾಗೂ ಮೂಗಿನ ಸ್ರಾವವನ್ನು ತೆಗೆದು ಆರ್‍ಟಿ-ಪಿಸಿಆರ್ ಲ್ಯಾಬೋರೇಟರಿಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು.

ರ್ಯಾಪಿಡ್ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದು ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದಲ್ಲಿ ಮತ್ತು ಬೇರೆ ಯಾವುದೇ ಕಾಯಿಲೆಗಳು ಇಲ್ಲದಿದ್ದಲ್ಲಿ ಮನೆಯಲ್ಲೇ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಲಕ್ಷಣಗಳು ಇದ್ದು, ಆರೋಗ್ಯದಲ್ಲಿ ಏನಾದರೂ ಅಲ್ಪಸ್ವಲ್ಪ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ದಾಖಲು ಮಾಡುವ ಎಲ್ಲಾ ಆಸ್ಪತ್ರೆಗಳಿಗೂ ಇಲಾಖೆಯಿಂದ ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ನೀಡಲಾಗಿದ್ದು, ಈ ಕಿಟ್‍ನ ಮೂಲಕ ಖಾಸಗಿ ಆಸ್ಪತ್ರೆಗೆ ಯಾವುದೇ ವ್ಯಕ್ತಿಗಳು ದಾಖಲು ಮಾಡುವ ಸಂದರ್ಭದಲ್ಲಿ ಕೂಡಲೇ ತ್ವರಿತವಾಗಿ ಪರೀಕ್ಷೆಗೊಳಪಡಿಸಿ ಶೀಘ್ರವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ರ್ಯಾಪಿಡ್ ಟೆಸ್ಟ್ ಉಚಿತವಾಗಿಯೇ ನಡೆಸಲು ನಿರ್ದೇಶಿಸಲಾಗಿದೆ.

ಆರ್‍ಟಿ-ಪಿಸಿಆರ್ – ಪರೀಕ್ಷಾ ವಿಧಾನದಲ್ಲಿ ಕಾಯಿಲೆಯ ಗುಣಲಕ್ಷಣಗಳಿರುವ ವ್ಯಕ್ತಿಗಳ ಗಂಟಲು ದ್ರವ ಹಾಗೂ ಮೂಗಿನ ಸ್ರಾವವನ್ನು ಪಡೆದು ಆರ್‍ಟಿ-ಪಿಸಿಆರ್ ಯಂತ್ರದ ಮೂಲಕ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ಒಳಪಡಿಸುವುದು. ಈ ಪರೀಕ್ಷೆಯಲ್ಲಿ ಫಲಿತಾಂಶವನ್ನು ಪಡೆಯಲು 24 ಗಂಟೆಗಳ ಅವಧಿಯು ಬೇಕಾಗಿರುತ್ತದೆ.

ಆರ್‍ಟಿ-ಪಿಸಿಆರ್ – ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ಎಪ್ರಿಲ್ 30 ರೊಳಗೆ ಜಿಲ್ಲಾ ಸರ್ವೇಕ್ಷಣಾ ಘಟಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆರ್‍ಟಿ-ಪಿಸಿಆರ್ ಲ್ಯಾಬ್‍ನ ವ್ಯವಸ್ಥೆ ಮಾಡಲಾಗಿದೆ.

ಮೇ 31 ರೊಳಗೆ ಜಿಲ್ಲೆಯ 8 ವೈದ್ಯಕೀಯ ಕಾಲೇಜುಗಳಲ್ಲೂ ಆರ್‍ಟಿ-ಪಿಸಿಆರ್ ಲ್ಯಾಬೋರೇಟರಿ ವ್ಯವಸ್ಥೆ ಮಾಡಲು ಸೂಚಿಸಲಾಗಿದ್ದು ಅದರಂತೆ ಜಿಲ್ಲೆಯ 5 ವೈದ್ಯಕೀಯ ಕಾಲೇಜುಗಳಲ್ಲೂ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಸರಕಾರದ ಮಾರ್ಗಸೂಚಿಯ ಪ್ರಕಾರ ಜಿಲ್ಲಾ ವೆನ್ಲಾಕ್ ಲ್ಯಾಬೋರೇಟರಿಯಲ್ಲಿ ಉಚಿತ ಪರೀಕ್ಷೆಯನ್ನೂ, ವೆನ್ಲಾಕ್ ಲ್ಯಾಬ್‍ನಿಂದ ಖಾಸಗಿ ಆಸ್ಪತ್ರೆಗಳಲ್ಲಿಗೆ ಶಿಫಾರಸು ಮಾಡಿದ್ದಲ್ಲಿ ರೂ. 2,000 ದರದ ಮೂಲಕ ಪರೀಕ್ಷೆ ಮಾಡಲಾಗುವುದು.

ಉಳಿದಂತೆ ರೋಗಿ, ವ್ಯಕ್ತಿಯು ನೇರವಾಗಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಾಗಿ ಪರೀಕ್ಷೆ ಒಳಪಟ್ಟರೆ ರೂ. 2,900 ಇತರ ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಪರೀಕ್ಷೆ ಮಾದರಿಗಳನ್ನು ಕಳುಹಿಸಿ ಕೊಟ್ಟಲ್ಲಿ ರೂ. 2700 ದರವನ್ನು ನಿಗದಿಪಡಿಸಲಾಗಿದೆ. ಉಳಿದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲೂ ಮುಂದಿನ ಹಂತದಲ್ಲಿ ಆರ್‍ಟಿ-ಪಿಸಿಆರ್ ಲ್ಯಾಬೋರೇಟರಿ ವ್ಯವಸ್ಥೆಯ ಕಾರ್ಯ ಪ್ರಗತಿಯಲ್ಲಿದೆ.

ಕೆಲವೊಂದು ಮಾಹಿತಿಯ ಕೊರತೆಯಿಂದಾಗಿ ರ್ಯಾಪಿಡ್ ಪರೀಕ್ಷೆಯಿಂದ ನೆಗೆಟಿವ್ ಬಂದು, ನಂತರ ರೋಗ ಲಕ್ಷಣವಿದ್ದು, ಆರ್‍ಟಿ-ಪಿಸಿಆರ್ ಮಾಡಿದಾಗ ಪಾಸಿಟಿವ್ ಬಂದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದು, ಈಗಾಗಲೇ ತಿಳಿಸಿದಂತೆ ರ್ಯಾಪಿಡ್ ಆಂಟಿಜೆನ್ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದವರೆಲ್ಲರೂ ಪಾಸಿಟಿವ್ ಪ್ರಕರಣವೇ ಆಗಿರುತ್ತದೆ. ರ್ಯಾರ್ಟ್ ನಲ್ಲಿ ನೆಗೆಟಿವ್ ಬಂದು ರೋಗ ಲಕ್ಷಣಗಳು ಕಂಡುಬಂದು ಆರ್‍ಟಿ-ಪಿಸಿಆರ್‍ನಲ್ಲಿ ಪಾಸಿಟಿವ್ ಬಂದಲ್ಲಿ ಪಾಸಿಟಿವ್ ಎಂದೇ ದಾಖಲಾಗುತ್ತದೆ.

ಈ ಬಗ್ಗೆ ಜನರಲ್ಲಿ ತಪ್ಪು ಸಂದೇಶ ಹೋಗುತ್ತಿದ್ದು, ಈ ಸಂದೇಶವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಿಗೆ ಮಾಧ್ಯಮಗಳ ಮೂಲಕ ಪ್ರಯೋಗಶಾಲಾ ಪರೀಕ್ಷಾ ವಿಧಾನಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಂಟೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.