ಕರಾವಳಿ

ಮಂಗಳೂರು ಪಾಲಿಕೆ ಅಧಿಕಾರಿಗಳ ಎಡವಟ್ಟು : ಜನಸಾಮಾನ್ಯರನ್ನು ಹೇಗೆ ಮೂರ್ಖರನ್ನಾಗಿಸುತ್ತಿದೆ ಈ ಜಾಹೀರಾತು

Pinterest LinkedIn Tumblr

ಮಂಗಳೂರು, ಆಗಸ್ಟ್11: ಮಂಗಳೂರಿನ ಜನರನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಗೆ ಮೂರ್ಖರನ್ನಾಗಿಸುತ್ತಾರೆ ನೋಡಿ. ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ವರ್ಷ ಕಾರ್ಯಕ್ರಮಕ್ಕೆ ಪೆಂಡಾಲ್, ಕುರ್ಚಿಗಳನ್ನು ಒದಗಿಸಲು ಮಹಾನಗ ಪಾಲಿಕೆ ವತಿಯಿಂದ ಟೆಂಡರ್ ನೋಟೀಸು ಜಾಹೀರಾತು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಆದರೆ ಆ ನೋಟೀಸಿನಲ್ಲಿ ಆಗಸ್ಟ್ 15ರ ಕಾರ್ಯಕ್ರಮಕ್ಕೆ ಒದಗಿಸಬೇಕಾದ ವ್ಯವಸ್ಥೆಗಳಿಗೆ ಟೆಂಡರ್ ಫಾರಂ ಪಡೆಯಲು ಆಗಸ್ಟ್ 17 ಕೊನೆಯ ದಿನವಾಗಿದ್ದರೆ, ಭರ್ತಿ ಮಾಡಿದ ಆರ್ಥಿಕ ಬಿಡ್ ಸಲ್ಲಿಸಲು ಆ. 18 ಕೊನೆಯ ದಿನವೆಂದು ಪ್ರಕಟವಾಗಿತ್ತು.

ಅಧಿಕಾರಿಗಳಿಂದಾದ ಈ ಎಡವಟ್ಟಿನ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿರುವಂತೆಯೇ ಹಳೆಯ ಟೆಂಡರ್ ರದ್ದುಪಡಿಸಿ, ಹೊಸ ಟೆಂಡರ್ ಕರೆಯಲಾಗಿದೆ.

ಸರಕಾರದ ನಿಯಮ ಪ್ರಕಾರ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲದ ಕಾರಣ ಜನರನ್ನು ಮೂರ್ಖರನ್ನಾಗಿಸಲು ಆಗಸ್ಟ್ 15ರ ಕಾರ್ಯಕ್ರಮದ ವ್ಯವಸ್ಥೆಗೆ ಈ ರೀತಿಯ ಟೆಂಡರ್ ಜಾಹೀರಾತು ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರ ತಿ ವರ್ಷ ಕೇಂದ್ರ ಮೈದಾನದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಪೆಂಡಾಲ್,ಕುರ್ಚಿ ಗಳನ್ನು ಒದಗಿಸಲು ದಿನಾಂಕ 08-08-2020ರ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ.

ಕಾರ್ಯಕ್ರಮ ಆಗಸ್ಟ್ 15 ರಂದು. ಟೆಂಡರ್ ಪಾರ್ಮ್ ಪಡೆಯಲು ಕೊನೆಯ ದಿನ 17-08-2020,ಭರ್ತಿ ಮಾಡಿದ ಬಿಡ್ ಸಲ್ಲಿಸಲು ಕೊನೆಯ ದಿನ18-08-2020. ಈಗ ಹೇಳಿಪಾಲಿಕೆ ಅಧಿಕಾರಿಗಳು ಜನರನ್ನು ಹೇಗೆ ಮೂರ್ಖರನ್ನಾಗಿಸುತ್ತಿದ್ದಾರೆ!!

ಕರ್ನಾಟಕ ಸರಕಾರದ ನಿಯಮ ಪ್ರಕಾರ ಟೆಂಡರ್ ಕರೆಯದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ಒಂದು ಟಂಡರ್ ಕೆರಯುವ ನಾಟಕ. ಈ ಕಾಮಗಾರಿಯನ್ನು ಪ್ರತಿ ಬಾರಿ ಮಾಡುವವರು “ಪ್ರಿಯಾ ಶಾಮಿಯಾನ” ದವರು. ಈ ಬಾರಿಯು ಅವರೆ ಮಾಡುವುದು.ಈ ಟೆಂಡರ್ ಕೇವಲ ನಾಟಕ.

ಇನ್ನು ಕೊರೋನದಿಂದಾಗಿ ಈಬಾರಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ಮಾತ್ರ ಇರಲಿದೆ. ಅದರೆ ಪ್ರತಿ ವರ್ಷದಷ್ಟೆ ಮೊತ್ತಕ್ಕೆ ಟೆಂಡರ್ ಕರೆದಿರುವುದು ಹೇಗೆ?. ಹಿಂದಿನ ವರ್ಷ ಗಳಲ್ಲಿ ಹಾಕಿದಷ್ಟು ದೊಡ್ಡ ಪೆಂಡಾಲ್ ಇಲ್ಲ, ಅಷ್ಟು ಕುರ್ಚಿಗಳು ಬೇಕಾಗಿಲ್ಲ ಮತ್ತೆ ಹೇಗೆ 4 ಲಕ್ಷ ಕ್ಕಿಂತಲೂ ಹೆಚ್ಚು ಮೊತ್ತಕ್ಕೆ ಟಂಡರ್ ಕರೆಯಲಾಯಿತು?.

ಕಳೆದ ವರ್ಷ ತಯಾರಿಸಿದ ಅಂದಾಜು ಪಟ್ಟಿಯ ದಿನಾಂಕ ಬದಲಾಯಿಸಿ ಟೆಂಡರ್ ಕರೆಯಲಾಗಿದೆ. ಇನ್ನೂ ಒಂದು ಮುಖ್ಯ ವಿಷಯ ವೆಂದರೆ ಪ್ರತಿ ಬಾರಿ ಆಗಸ್ಟ್ 15ಕ್ಕೆಯೆ ಸ್ವಾತಂತ್ರ್ಯ ದಿನಾಚರಣೆ ಬರುತ್ತದೆ ಎಂಬ ಸ್ವಲ್ಪ ಪರಿ ಜ್ಞಾನಕೂಡ ಪಾಲಿಕೆ ಅಧಿಕಾರಿಗಳಿಗೆ ಇಲ್ಲವೇ?

ಇಲ್ಲದೇ ಇರುತ್ತಿದ್ದರೆ ಈ ರೀತಿ ಸ್ವಾತಂತ್ರ್ಯ ದಿನಾಚರಣೆಯ ನಂತರ ಟೆಂಡರ್ ತೆರೆಯುವಂತೆ ಟೆಂಡರ್ ಕರೆಯುತ್ತಿದ್ದರೇ?. ಈ ಪರಿ ಅಧಿಕಾರಿಗಳು ಎಡವಟ್ಟು ಮಾಡಿಕೊಳ್ಳುವುದೆಂದರೆ ಏನರ್ಥ? ಮಂಗಳೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ರೈಲು ಹೊರಟ ಮೇಲೆ ಟಿಕೆಟ್ ಪಡೆಯಲು ಹೊರಟಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮನಪಾ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೊಸ ಟೆಂಡರ್‌ನ ದಿನಾಂಕದಲ್ಲಿ ಮಾತ್ರ ಬದಲಾವಣೆ – ಮೊತ್ತದಲ್ಲಿ ಬದಲಾವಣೆಯಿಲ್ಲ..

‘ಸ್ವಾತಂತ್ರೋತ್ಸವ ಕಾರ್ಯಕ್ರಮದ ವ್ಯವಸ್ತೆಗಾಗಿ ಕರೆಯಲಾದ ಹಳೆಯ ಟೆಂಡರ್ ಜಾಹೀರಾತಿನಲ್ಲಿ ದಿನಾಂಕದಲ್ಲಿ ಆಗಿರುವ ಲೋಪದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ ಇದೀಗ ಹೊಸ ಟೆಂಡರ್ ಕರೆಯಲಾಗಿದೆ ” ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ದಿನೇಶ್ ತಿಳಿಸಿದ್ದಾರೆ.

ಆದರೆ ಹಳೆ ಟೆಂಡರ್ ರದ್ದುಪಡಿಸಿ ಪ್ರಕಟಿಸಲಾಗಿರುವ ಹೊಸ ಟೆಂಡರ್‌ನಲ್ಲಿ ದಿನಾಂಕವನ್ನು ಬದಲಿಸಲಾಗಿದ್ದು, ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಹಾಗೂ ಖಾಲಿ ಟೆಂಡರ್ ಫಾರಂ ಕರೆಯಲು ಕೊನೆಯ ದಿನಾಂಕ ಆ. 12 ಹಾಗೂ ಭರ್ತಿ ಮಾಡಿದ ಬಿಡ್ ಸಲ್ಲಿಸಲು ಆ. 13ರ ಸಂಜೆ 4 ಗಂಟೆಗೆ ಕೊನೆಯ ದಿನಾಂಕವೆಂದು ಪ್ರಕಟಿಸಲಾಗಿದೆ.

ಆದರೆ ಅಂದಾಜು ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ! ಈಗ ಹೇಳಿ, ಮಂಗಳೂರಿನ ಜನರನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಗೆ ಮೂರ್ಖರನ್ನಾಗಿಸುತ್ತಾರೆ ಎಂಬ ಬರಹದಲ್ಲಿ ಏನಾದರೂ ಅನುಮಾನವಿದೆಯೇ?

Comments are closed.