ಕರಾವಳಿ

ಮಳೆಹಾನಿ ತಡೆಗೆ ಮುನ್ನೆಚ್ಚರಿಕೆ ಕೈಗೊಂಡು ಸಾವು ನೋವು ಸಂಭವಿಸದಂತೆ ಎಚ್ಚರವಹಿಸಿ: ಸಚಿವ ಅಶೋಕ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ಪ್ರಕೃತಿ ವಿಕೋಪದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಗಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ , ಸಾವು ನೋವುಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲೆಯ ಮಳೆ ಹಾನಿ ಹಾಗೂ ಪ್ರಾಕೃತಿಕ ವಿಕೋಪದ ಕುರಿತ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಕೃತಿಕ ವಿಕೋಪ ತಡೆಯಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದ್ದು, ಇದಕ್ಕಾಗಿ ಸೂಕ್ತ ಪೂರ್ವ ನಿಯೋಜಿತವಾದ ಯೋಜನೆ ರೂಪಿಸಿಕೊಳ್ಳಿ, ಇಲ್ಲವಾದಲ್ಲಿ ಹೆಚ್ಚಿನ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆಯಿದೆ, ಜಿಲ್ಲೆಯಲ್ಲಿ ವಿಕೋಪ ತಡೆಗೆ ಅಗತ್ಯವಿದ್ದಲ್ಲಿ ಮಂಗಳೂರಿನಲ್ಲಿರುವ ಎನ್.ಡಿ.ಅರ್.ಎಫ್ ತಂಡದ ನೆರವು ಪಡೆಯುವಂತೆ ಸಚಿವ ಅಶೋಕ್ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಅನಾಹುತಗಳು ಸಂಭವಿಸಿರುವ ಪ್ರದೇಶಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಸಾರ್ವಜನಿಕರಿಗೆ ಹಾನಿಯಾಗದಂತೆ ನೋಡಿಕೊಳ್ಳಿ, ಹಾನಿಗೊಳಗಾದವರಿಗೆ ಪರಿಹರ ವಿತರಣೆಗೆ ಅನುದಾನದ ಕೊರತೆಯಿಲ್ಲ, ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅವರಿಗೆ ಅಗತ್ಯ ಸೌಲಭ್ಯ ಒದಗಿಸಿ ಎಂದು ಕಂದಾಯ ಸಚಿವರು ಹೇಳಿದರು.

ಪ್ರಾಕೃತಿಕ ವಿಕೋಪ ತಡೆಗೆ ಜಿಲ್ಲಾ , ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಿ, ನೋಡೆಲ್ ಅಧಿಕಾರಿಗಳನ್ನು ನೇಮಿಸಿ, ಈ ಕಾರ್ಯಪಡೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಿ, ಪ್ರತಿ 15 ದಿನಕ್ಕೊಮ್ಮ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು , ಚರ್ಚಿಸಿ , ಗ್ರಾಮ ಮಟ್ಟದಲ್ಲಿ ಸಾಮಾಜಿಕ ಕಾರ್ಯಕತರ್ರರನ್ನು ಗುರುತಿಸಿ , ಅವರಿಗೆ ವಿಕೋಪ ನಿರ್ವಹಣೆ ಕುರಿತು ತರಬೇತಿ ನೀಡಿ, ತುರ್ತು ಸಂದರ್ಭಗಳಲ್ಲಿ ಅವರ ನೆರವು ಪಡೆಯಿರಿ, ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಜಿಲ್ಲೆಯ ಮಳೆಯು ಪ್ರಮಾಣ ಮತ್ತು ಬೆಳೆ ವಿವರದ ಮಾಹಿತಿ ಪಡೆದ ಸಚಿವರು, ಭಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸಿ,ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ, , ಬೆಳ ಹಾನಿಯ ಕುರಿತಂತೆ ಸಮರ್ಪಕ ರೀತಿಯಲ್ಲಿ ಸಮೀಕ್ಷೆ ನಡೆಸಿ, ಅಂದಾಜು ನಷ್ಠದ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಸಂತ್ರಸ್ಥರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಿ ಎಂದರು.

ಉಡುಪಿ ಜಿಲ್ಲೆಯಲ್ಲಿ 13 ಭಾಗದಲ್ಲಿ ಕಡಲ ಕೊರೆತ ಸಂಭವಿಸುವುದನ್ನು ಗುರುತಿಸಿದ್ದು, ಇದನ್ನು ತಡೆಯಲು ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕಳೆದ ಬಾರಿ ಮನೆ ಹಾನಿಯದವರಿಗೆ , ಮನೆ ನಿರ್ಮಿಸಲು 2 ಮತ್ತು 3 ನೇ ಹಂತದ ಅನುದಾನ ಶೀಘ್ರ ಬಿಡುಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿಇಓ ಗೆ ಸೂಚಿಸಿದರು.

ಕಾರ್ಕಳದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಯಡಿ 10 ಕೋಟಿ ವೆಚ್ಚದಲ್ಲಿ ಸುಸುಜ್ಜಿತ ಭವನ ನಿರ್ಮಾಣ ಮಾಡಲಾಗುವುದು, ಈ ಭವನದಲ್ಲಿ ವಿಕೋಪ ಕುರಿತು ತರಬೇತಿ ನೀಡಲು ಮತ್ತು ನೆರೆಯಿಂದ ಹಾನಿಯಾದವರಿಗೆ ಪುರ್ನವಸತಿ ಕಲ್ಪಿಸಲಾಗುವುದು, , ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿ,ವಾಚನಾಲಯ, ಆಸ್ಪತ್ರೆ ಈ ಭವನದಲ್ಲಿ ಇರಲಿದ್ದು, ಇತರೆ ಸಮಯದಲ್ಲಿ ಸರಕಾರಿ ಸಮಾರಂಭಗಳಿಗೆ ಈ ಭವನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.

ರಾಜ್ಯದ ಮುಜರಾಯಿ ಸಚಿವರ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಳೆದ ಬಾರಿಯ ಮನೆ ಹಾನಿಗೆ ಮೊದಲ ಕಂತು ಬಿಡುಗಡೆ ಆಗಿದೆ,ಬಾಕಿ ಕಂತುಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಹೇಳಿದರು.
ಉಡುಪಿ ಶಾಸಕ ರಘುಪತಿಭಟ್ ಮಾತನಾಡಿ, ಕಡಲ ಕೊರೆತೆ ತಡೆಗೆ , ಉತ್ತಮ ಗುಣಮಟ್ಟದ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ ಮಳೆಯಿಂದ ಗ್ರಾಮೀಣ ಭಾಗದ ರಸ್ತೆ ಸೇತುವೆ, ಶಾಲಾ ಕಾಂಪೌಂಡ್ ಹಾಳಾಗಿದ್ದು, ಇವುಗಳನ್ನು ತುರ್ತಾಗಿ ದುರಸ್ತಿ ಕಾರ್ಯ ನಡೆಸಬೇಕು ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಸಮುದ್ರ ಕೊರತೆ ಮಾತ್ರವಲ್ಲದೇ , ನದಿ ಕೊರೆತೆದಿಂದ ಸಹ ಹಾನಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ರಾಜ್ಯ ಸರ್ಕಾರದಿಂದ ನೀಡಲಾಗುವ ಹೊಸ ಎಸ್.ಡಿ.ಅರ್.ಎಫ್ ತಂಡವನ್ನು ಉಡುಪಿ ಜಿಲ್ಲೆಯಲ್ಲಿ ಕೇಂದ್ರೀಕೃತಗೊಳಿಸಿದರೆ, ತುರ್ತು ಸಂದರ್ಭದಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಇಲ್ಲಿಂದ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿರಿದ್ದರು.

Comments are closed.