ಕರಾವಳಿ

ಜಲತಾಣದಲ್ಲಿ ಕೊಲೆ ಬೆದರಿಕೆ ಬಂದ ಬೆನ್ನಲ್ಲೇ ದ.ಕ.ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ!!

Pinterest LinkedIn Tumblr

ಮಂಗಳೂರು, ಜುಲೈ.28: ಜಿಲ್ಲೆಯಲ್ಲಿ ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ ಗೋವು ಸಾಗಾಟಗಾರರ ಮೇಲಿನ ಹಲ್ಲೆ, ದರೋಡೆ ಕೃತ್ಯಗಳ ಬಗ್ಗೆ ನಿನ್ನೆಯಷ್ಟೇ ಧ್ವನಿ ಎತ್ತಿದ್ದ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ಇಂದು ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದ್ದು ಅವರ ಸ್ಥಾನಕ್ಕೆ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿ.ಇ ಓ ಆಗಿದ್ದ ಡಾ. ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ದ.ಕ.ಜಿಲ್ಲಾ ನೂತನ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ 

ಸಿಂಧೂ ರೂಪೇಶ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಡಾ. ರಾಜೇಂದ್ರ ಕೆ.ವಿ ಅವರು ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಗೋಸಾಗಾಟ ಮಾಡುವ ವ್ಯಾಪಾರಿಗಳಿಗೆ ಹಲ್ಲೆ ಮಾಡುವವರ, ದರೋಡೆ ಮಾಡುವ ಖದೀಮರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ನಿನ್ನೆ ಖಡಕ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವು ಕಿಡಿಗೇಡಿಗಳು ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಸಿ ವಿರುದ್ಧ ಬಹಿರಂಗ ಎಚ್ಚರಿಕೆ ನೀಡಿದ್ದು ಕೊಲೆಗೈಯುವ ಬೆದರಿಕೆ ಒಡ್ಡಿದ್ದರು.

“ರಾಮ್ ಸೇನಾ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ತುಳು ಭಾಷೆಯಲ್ಲಿ “ಫಸ್ಟ್ ಮೊಲೆನ್ ಕಡ್ತ್ ಕೆರೊಡು” (ಮೊದಲು ಇವಳನ್ನು ಕಡಿದು ಕೊಲೆಗೈಯಬೇಕು) ಎಂದು ಪೋಸ್ಟ್ ಗೆ ಕಾಮೆಂಟ್ ಬರೆಯುವ ಮೂಲಕ ಕೊಲೆ ಬೆದರಿಕೆ ಒಡ್ಡಲಾಗಿತ್ತು.

ಇಂಥ ಕಿಡಿಗೇಡಿಗಳನ್ನು ಮತ್ತು ಬೆಂಬಲಿಸುವ ಗ್ರೂಪ್ ಅಡ್ಮಿನ್ ಗಳನ್ನು ಕಠಿಣ ಕಾಯ್ದೆಯಡಿ ತಕ್ಷಣವೇ ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು ಎನ್ನುವ ಮಾತುಗಳು ನಾಗರಿಕ ವಲಯದಲ್ಲಿ ಕೇಳಿಬಂದಿದ್ದು, ಇದೇ ವೇಳೆ ಜಿಲ್ಲಾಧಿಕಾರಿಗಳ ದಿಢೀರ್ ವರ್ಗಾವಣೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Comments are closed.