ಮಂಗಳೂರು ಜುಲೈ 16 : ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳ ತಂಡವು ರೈತರ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿತು.
ಕೃಷಿ ಇಲಾಖೆ, ಮಂಗಳೂರು ಇದರ 2020-21 ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ಮಂಗಳೂರು 2020-21 ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಕೇದಾರನಾಥ್, ಡಾ. ರಶ್ಮಿ, ಡಾ. ಶೋಧನ್ ಹಾಗೂ ಮಂಗಳೂರು ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರ ರಶ್ಮಿ, ಇವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಬೆಳಾಲು ಹಾಗೂ ಕೊಕ್ರಾಡಿ ಗ್ರಾಮಕ್ಕೆ ವಿಜ್ಞಾನಿ ಮತ್ತು ವಿಸ್ತರಣಾಧಿಕಾರಿ ಜಂಟಿ ಕ್ಷೇತ್ರ ಭೇಟಿ ನೀಡಿದರು.
ಬೆಳಾಲು ಗ್ರಾಮದ ಪ್ರಗತಿಪರ ಕೃಷಿಕ ಸುಲೈಮಾನ್ ಭೀಮಂಡೆ ಇವರ, ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ. ಕೇದಾರನಾಥ್ ಸೇರಿದ್ದ ರೈತರಿಗೆ ಭತ್ತದಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆಯಲ್ಲಿ ಅನಾವಶ್ಯಕ ಪೀಡೆನಾಶಕಗಳ ಹೆಚ್ಚಿನ ಬಳಕೆಯಿಂದ ಪರಿಸರ ಸ್ನೇಹಿ ಪರತಂತ್ರ ಮತ್ತು ಪರಭಕ್ಷಕ ಕೀಟಗಳ ನಾಶವಾಗುತ್ತದೆ ಹಾಗೂ ಕೀಟ ಮತ್ತು ರೋಗಕಾರಕಗಳ ಸಂಖ್ಯೆ ಉಲ್ಬಣಗೊಳ್ಳುತ್ತದೆ ಆದ್ದರಿಂದ ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮಾ ಹಾಗೂ ಸೂಡೋಮೊನಾಸ್ ಬಳಸುವುದು ಉತ್ತಮ ಎಂದು ಮಾಹಿತಿ ನೀಡಿದರು.
ಕೊಕ್ರಾಡಿ ಗ್ರಾಮದ ಪ್ರಗತಿಪರ ಕೃಷಿಕ ಸುಧಾಕರ ಜೈನ್ ಇವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಡಾ. ರಶ್ಮಿ, ತೋಟಗಾರಿಕಾ ವಿಜ್ಞಾನಿ ತೋಟಗಾರಿಕಾ ಬೆಳೆಗಳ ಪ್ರಾಮುಖ್ಯತೆ, ಅಡಿಕೆ ಹಾಗೂ ತೆಂಗಿನ ಬೆಳೆಯಲ್ಲಿ ಸಮಗ್ರ ಬೇಸಾಯ ಪದ್ಧತಿ ಹಾಗೂ ನಾಟಿ ಪೂರ್ವ ಹಾಗೂ ಬಳಿಕದ ಆರೈಕೆ ಬಗ್ಗೆ ಸೇರಿದ್ದ ರೈತರಿಗೆ ಮಾಹಿತಿ ನೀಡಿದರು.
ಮಂಗಳೂರಿನ ಪಶು ವೈದ್ಯ ಡಾ. ಶೋಧನ್ ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆಯಲ್ಲಿ ರೈತರ ಸಮಸ್ಯೆಯನ್ನು ಆಲಿಸಿ ಮಾಹಿತಿಯನ್ನು ನೀಡಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಮಹಾವೀರ್ ಅವರು ಅಡಿಕೆ ಹಾಗೂ ತೆಂಗಿನಲ್ಲಿ ಕೆಂಪು ಮೂತಿ ಹುಳುವಿನ ಹಾನಿ, ಅದನ್ನು ಗುರುತಿಸುವಿಕೆ ಹಾಗೂ ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ. ಕೇದಾರನಾಥ್ ಕೆಂಪು ಮೂತಿ ಹುಳುವನ್ನು ನಿರ್ವಹಿಸುವ ಸಲುವಾಗಿ ಮೋಹಕ ಬಲೆಗಳ ಉಪಯೋಗ ಹಾಗೂ ಅವಶ್ಯಕ ಪೀಡೆನಾಶಕಗಳ ಮಿತ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆತ್ಮ ಯೋಜನೆ ಸಿಬ್ಬಂದಿಗಳಾದ ಶರಣ್ ಮತ್ತು ಚಂದ್ರಕಲಾ ಉಪಸ್ಥಿತರಿದ್ದರು.
Comments are closed.