ಕರಾವಳಿ

ಕೊರೊನಾ ಸಂಕಷ್ಟ : ಕಾರ್‌ಸ್ಟ್ರೀಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಕಿಟ್‍ಗಳ ವಿತರಣೆ

Pinterest LinkedIn Tumblr

ಮಂಗಳೂರು ಜುಲೈ 09 : ರಥಬೀದಿಯ ಡಾ. ಪಿ. ದಯಾನಂದ ಪೈ.- ಪಿ. ಸತೀಶ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ, ಕೊರೊನಾ ವೈರಸ್‍ನಿಂದ ಉಂಟಾದ ಸಂಕಷ್ಟದಿಂದ ತೊಂದರೆಗೊಳಗಾದ ಕಾಲೇಜಿನ ವಿದ್ಯಾರ್ಥಿಗಳ ಹೆತ್ತವರಿಗೆ ಇಸ್ಕಾನ್‍ನ ಅಕ್ಷಯ ಪಾತ್ರೆ ವತಿಯಿಂದ 150ಕ್ಕೂ ಹೆಚ್ಚು ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.

ಇಸ್ಕಾನ್‍ನ ಅಕ್ಷಯ ಪಾತ್ರೆ ಕೋವಿಡ್- 19ನ ಪರಿಹಾರ ಸಂಯೋಜಕ ಹಾಗೂ ಇಸ್ಕಾನ್ ಅಕ್ಷಯ ಪಾತ್ರೆಯ ಉಪಾಧ್ಯಾಕ್ಷ ಸನಂದನಾ ದಾಸ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಧೃತಿಗೆಡದೆ ಕೋವಿಡ್-19 ಸೃಷ್ಟಿಸಿರುವ ಆತಂಕದ ಸಮಯದಲ್ಲಿ ಧನಾತ್ಮಕವಾಗಿ ಆಲೋಚಿಸಿ ಆತ್ಮಸ್ಥೈರ್ಯದೊಂದಿಗೆ ಹೊಸ ವಿಷಯ, ತಂತ್ರಜ್ಞಾನ, ಸಂಸ್ಕಾರಗಳನ್ನು ಕಲಿತು ಹೊಸತನಕ್ಕೆ ನಾಂದಿ ಹಾಡಲು ಕರೆ ನೀಡಿದರು.

ಕಿಟ್‍ನಲ್ಲಿ ಸುಮಾರು 16 ಬಗೆಯ ಆಹಾರ ಸಾಮಗ್ರಿಗಳಿದ್ದು ಸಣ್ಣ ಕುಟುಂಬಕ್ಕೆ 12 ದಿನಗಳಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ನೀಡಲಾಗಿತ್ತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಾ ಕೊರೊನಾ ವೈರಸ್ ವಿದ್ಯಾರ್ಥಿಗಳಿಗೆ ಶುಚಿತ್ವ, ಆನ್‍ಲೈನ್ ಪಾಠವಲ್ಲದೇ ಬದುಕಿನ ಪಾಠವನ್ನು ಸಹ ಕಲಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ.ಶಿವರಾಮ ಪಿ. ಉಪಸ್ಥಿತರಿದ್ದು, ಇಸ್ಕಾನ್ ಅಕ್ಷಯ ಪಾತ್ರೆಗೆ ಹಾಗೂ ವಿಶೇಷವಾಗಿ ಆಹಾರದ ಕಿಟ್‍ಗಳನ್ನು ಪ್ರಾಯೋಜಿಸಿದ ಹೈದ್ರಾಬಾದ್‍ನ ಮೈಕ್ರಾನ್, ಬೆಂಗಳೂರಿನ ಅಡೊಬ್ ಕಂಪೆನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ಸ್ವಯಂ ಸೇವಕರಾದ ತುಷಾರ್, ಅಕ್ಷಯ್, ಪ್ರಜ್ವಲ್, ವಿನೋದ ಇವರುಗಳು ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಕಾಲೇಜಿನ 3 ತಂಡಗಳು ಕಿಟ್‍ಗಳನ್ನು ತಯಾರು ಮಾಡಲು ಅಕ್ಷಯ ಪಾತ್ರೆಗೆ ಸಹಕರಿಸಿರುತ್ತಾರೆ.

Comments are closed.