ಕರಾವಳಿ

ಕೋವಿಡ್ ಆಸ್ಪತ್ರೆ ಆದ ವೆನ್ಲಾಕ್ – ಬೀದಿ ಪಾಲಾದ ಸಾವಿರಾರು ಬಡರೋಗಿಗಳು :ಇದಕ್ಕೆ ಹೊಣೆ ಯಾರು??

Pinterest LinkedIn Tumblr

ಬಡ ರೋಗಿಗಳನ್ನು ಬೀದಿಯಲ್ಲಿ ಬಿಟ್ಟು ಮಾನವೀಯತೆ ಮರೆತ ಖಾಸಗಿ ಆಸ್ಪತ್ರೆಗಳು : ಊಟ, ನೀರು ಕೊಟ್ಟು ಮಾನವೀಯತೆ ಮೆರೆದ ರಿಕ್ಷಾ ಚಾಲಕರು

ಮಂಗಳೂರು : ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಅಕ್ಕಪಕ್ಕದ ಹಲವಾರು ಜಿಲ್ಲೆಗಳ ಸಾವಿರಾರು ಮಂದಿ ಬಡವರು ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಅನಾಥ, ನಿರ್ಗತಿಕ ಕೆಲವರು ಆಸ್ಪತ್ರೆಯಲ್ಲೇ ಸರಕಾರ ನೀಡುವ ಊಟ ಸೇವಿಸಿಕೊಂಡು ಬದುಕುತ್ತಿದ್ದರು.

ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದಾಗ, ಅಲ್ಲಿದ್ದ ಹಲವರು ಬಿಡುಗಡೆಗೊಂಡು ಮನೆಗೆ ಹೋಗಿದ್ದರು. ತೀವ್ರ ಅನಾರೋಗ್ಯದ ಬಡ ರೋಗಿಗಳು, ನಿರ್ಗತಿಕರನ್ನು ಬೇರೆ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಹಣ ಕೊಡದೆ, ಸರಿಯಾಗಿ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಲಾಕ್‌ಡೌನ್ ಸಂದರ್ಭ ಬೀದಿಗೆ ಬಂದು ದಿಕ್ಕಿಲ್ಲದೆ ಪರದಾಡುತ್ತಿದ್ದರು. ಕೆಲವರನ್ನು ನಮ್ಮ ಮಿತ್ರರು ಆ್ಯಂಬುಲೆನ್ಸ್ ಮೂಲಕ ಅವರ ಊರಿಗೆ ತಲುಪಿಸಿದ್ದಿದೆ.

ಹಾಗೆ, ವೆನ್ಲಾಕ್‌ನಿಂದ ಸ್ಥಳಾಂತರಗೊಂಡು, ಮೂರು ತಿಂಗಳು ಖಾಸಗಿ ಆಸ್ಪತ್ರೆಯೊಂದರಲ್ಲಿದ್ದ ನಾಲ್ಕು ಮಂದಿ ಹಿರಿಯ ನಾಗರಿಕರನ್ನು ಆಸ್ಪತ್ರೆಯ ಸಿಬ್ಬಂದಿಗಳು ವಾಹನದಲ್ಲಿ ಗುರುವಾರ ರಾತ್ರಿ ಕಂಕನಾಡಿಯ ಮಾರುಕಟ್ಟೆ ಬಳಿ ತಂದು ಬಿಟ್ಟು ಹೋಗಿದ್ದಾರೆ.

ಇದನ್ನು ಕಂಡ ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳು ಅವರಿಗೆ ಊಟ, ನೀರು ತಂದು ಕೊಟ್ಟಿದ್ದಾರೆ. ಮಲಗಲು ನನ್ನ ಮಿತ್ರ ತುಫೈಲ್ ಅಹ್ಮದ್ ಬೆಡ್‌ಶೀಟ್, ಹೊದಿಕೆ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಇವರು ಬಹಳ ದೂರದವರೇನೂ ಅಲ್ಲ.‌ ಉಪ್ಪಿನಂಗಡಿಯ ರಘುರಾಮ, ಪರಂಗಿಪೇಟೆ ಪೊಳಲಿ ರಸ್ತೆಯ ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ. ಯಾರಾದರೂ ಯಾವುದಾದರೂ ವೃದ್ಧಾಶ್ರಮದಲ್ಲಿ ವ್ಯವಸ್ಥೆ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ನನ್ನದು.

ಕೋವಿಡ್ ರೋಗಿಗಳ ಚಿಕಿತ್ಸೆ ಹೆಸರಿನಲ್ಲಿ ಬ್ರಿಟಿಷರು ಕಟ್ಟಿದ್ದ ಅಷ್ಟು ದೊಡ್ಡ ಆಸ್ಪತ್ರೆಯನ್ನು ಏಕಾಏಕಿ ಖಾಲಿ ಮಾಡಿಸಿದ ಪರಿಣಾಮ ಇದು. ಹಿರಿಯ ಜೀವಗಳು ಮಳೆ, ಚಳಿಯಲ್ಲಿ ಮಾರುಕಟ್ಟೆ ಜಗಲಿಯಲ್ಲಿ ಮಲಗಿವೆ. ಇದಕ್ಕೆ ಯಾರು ಹೊಣೆ???

ವರದಿ : ಮುಹಮ್ಮದ್ ಆರಿಫ್ ಪಡುಬಿದ್ರಿ
( ವಿಜಯಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರು ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ಪ್ರತಿದಿನ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆಯನ್ನು ರೂಪಿಸಿದ ಎಂಫ್ರೆಂಡ್ಸ್ ಟ್ರಸ್ಟ್‌ನ ಕಾರ್ಯದರ್ಶಿ.)

Comments are closed.