ಕರಾವಳಿ

ದ.ಕ.ಜಿಲ್ಲೆಯಲ್ಲಿ ಇಂದು 14 ಪಾಸಿಟಿವ್ ಪ್ರಕರಣ : ಒಂದು ಪ್ರಕರಣ ಸೋಮೇಶ್ವರದಲ್ಲಿ ಪತ್ತೆ – ಸ್ಥಳೀಯರಲ್ಲಿ ಆತಂಕ

Pinterest LinkedIn Tumblr

ಮಂಗಳೂರು, ಮೇ.30: ರಾಜ್ಯದಲ್ಲಿ ಇಂದು ಮತ್ತೊಮ್ಮೆ ಕೊರೊನಾ ಮಹಾಸ್ಪೋಟ ಸಂಭವಿಸಿದ್ದು, ದ.ಕ.ಜಿಲ್ಲೆಯಲ್ಲಿ 14 ಸೇರಿದಂತೆ ಶನಿವಾರ ಒಂದೇ ದಿನ ಬರೋಬ್ಬರಿ 141 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ 5 ಗಂಟೆವರೆಗೆ 141 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದ.ಕ.ಜಿಲ್ಲೆಯಲ್ಲಿ 14 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಇವುಗಳ ಪೈಕಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರೆ, ಒಂದು ಪ್ರಕರಣ ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲುವಿನಲ್ಲಿ ವರದಿಯಾಗಿದೆ. 17 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2922ಕ್ಕೆ ಏರಿಕೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಕೊರೋನದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 49ಕ್ಕೆ ಏರಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಬೆಂಗಳೂರು ನಗರ 33, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 13, ಹಾಸನ 13, ವಿಜಯಪುರ 11, ಬೀದರ್ 10, ಶಿವಮೊಗ್ಗ 6, ದಾವಣಗೆರೆ ಮತ್ತು ಹಾವೇರಿಯಲ್ಲಿ ತಲಾ 4, ಕೋಲಾರ 3, ಕಲಬುರಗಿ, ಮೈಸೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 2, ಚಿತ್ರದುರ್ಗ, ತುಮಕೂರು, ಬೆಳಗಾವಿ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Comments are closed.