ಕರಾವಳಿ

ಕರಾವಳಿಯಲ್ಲಿ ನಾಳೆ ( ರಮಝಾನ್) ಈದ್ ಉಲ್ ಫಿತರ್ ಹಬ್ಬ ಆಚರಣೆ

Pinterest LinkedIn Tumblr

ಮಂಗಳೂರು, ಮೇ.23: ಪವಿತ್ರ ರಮಝಾನ್ (ಈದುಲ್ ಫಿತ್ರ್) ಹಬ್ಬವು ಮೇ24ರಂದು ನಡೆಯಲಿದೆ. ನಾಳೆ ಈದುಲ್ ಪಿತ್ರ್ ಹಬ್ಬ ಆಚರಿಸುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ ಹರಿ ತೀರ್ಮಾನಿಸಿದ್ದಾರೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.

ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 23 ಶನಿವಾರ 30 ನೇ ಉಪವಾಸ ಪೂರ್ತಿಗೊಳಿಸಿ ಮೇ 24 ಆದಿತ್ಯವಾರ ಈದುಲ್ ಫಿತ್ರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತೀರ್ಮಾನಿಸಿದ್ದಾರೆ. ಆದುದರಿಂದ ನಾಳೆ ಉಪವಾಸ ವೃತ ಮತ್ತು ಆದಿತ್ಯವಾರ ಮೇ 24 ರಂದು ಈದ್ ಆಚರಣೆ ನಡೆಯಲಿದೆ ಎಂದು ಅಶ್ರಫ್ ಅವರು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ಫ್ಯೂ ಸಡಿಲಿಸುವಂತೆ ದ.ಕ.ಡಿಸಿಗೆ ಮನವಿ:

ಪವಿತ್ರ ರಮಝಾನ್ (ಈದುಲ್ ಫಿತ್ರ್) ಹಬ್ಬವು ಮೇ24ರಂದು ಆದರೆ, ಆ ದಿನ ಕರ್ಫ್ಯೂ (ಲಾಕ್‌ಡೌನ್) ಸಡಿಲಿಸಬೇಕು ಎಂದು ನಗರದ ಬಂದರ್‌ನ ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.

ಶುಕ್ರವಾರ ಮುಸ್ಸಂಜೆ ಚಂದ್ರದರ್ಶನವಾದರೆ ಶನಿವಾರ ರಮಝಾನ್ ಹಬ್ಬ ಆಚರಿಸಲಾಗುತ್ತದೆ. ಆದರೆ ಶುಕ್ರವಾರ ಚಂದ್ರದರ್ಶನವಾಗದಿದ್ದಲ್ಲಿ ಮೇ 24ರ ರವಿವಾರ ಹಬ್ಬ ನಡೆಯಲಿದೆ. ಈಗಾಗಲೆ ಮೇ 24ರಂದು ದಿನವಿಡೀ ರಾಜ್ಯ ಸರಕಾರ ಕರ್ಫ್ಯೂ(ಲಾಕ್‌ಡೌನ್) ಘೋಷಿಸಿದೆ. ಹಬ್ಬದ ದಿನದಂದು ಕರ್ಫ್ಯೂ ಆದರೆ ಮುಸ್ಲಿಂ ಸಮುದಾಯದವರಿಗೆ ಅಗತ್ಯ ಆಹಾರ ಸಾಮಗ್ರಿಗಳ ಖರೀದಿಗೆ ಹಾಗೂ ಕುಟುಂಬಸ್ಥರನ್ನು ಸಂದರ್ಶಿಸಿ ಶುಭ ಹಾರೈಸಲು ಸಾಧ್ಯವಾಗುತ್ತಿಲ್ಲ.

ಅಂದು ವಾಹನ ಸಂಚಾರವನ್ನೂ ತಡೆ ಹಿಡಿಯಲಿರುವುದರಿಂದ ತುಂಬಾ ತೊಂದರೆಯಾಗಲಿದೆ. ಹಾಗಾಗಿ ರವಿವಾರ ಹಬ್ಬವಾದರೆ ಅಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ವೈ ಅಬ್ದುಲ್ಲ ಕುಂಞಿ ಹಾಗೂ ಆಡಳಿತ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Comments are closed.