ಕರಾವಳಿ

ಲಾಕ್ ಡೌನ್ ಅವಧಿ ವಿಸ್ತರಣೆ ಹಿನ್ನೆಲೆ : ರಾಜ್ಯಾದ್ಯಂತ ನ್ಯಾಯಾಲಯಗಳ ಬೇಸಿಗೆ ರಜೆ ರದ್ದು

Pinterest LinkedIn Tumblr

ಮಂಗಳೂರು : ಲಾಕ್ ಡೌನ್ ಅವಧಿ 3.5.2020 ರವರೆಗೆ ವಿಸ್ತರಿಸಿರುವುದರಿಂದ ಕರ್ನಾಟಕ ಹೈಕೋರ್ಟ್ ದಿನಾಂಕ 16.4.2020 ರ೦ದು ಹೊರಡಿಸಿದ ಅಧಿಸೂಚನೆಯಂತೆ ರಾಜ್ಯಾದ್ಯಂತ ನ್ಯಾಯಾಲಯಗಳ ಬೇಸಿಗೆ ರಜೆ ರದ್ದು ಪಡಿಸಿ ಆದೇಶ ಹೊರಡಿಸಿದೆ.

ದಿನಾಂಕ 13.4.2020 ರಂದು ಜರಗಿದ ಮಾನ್ಯ ಕರ್ನಾಟಕ ಹೈಕೋರ್ಟಿನ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಕಾರ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿದ ಆದೇಶ ಈ ಕೆಳಗಿನಂತಿವೆ.

1. ರಾಜ್ಯಾದ್ಯಂತ ಕಾರ್ಯನಿರ್ವಹಿಸುವ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಹಾಗೂ ಇತರ ವಿಚಾರಣಾ ನ್ಯಾಯಾಲಯಗಳು; ಕೌಟುಂಬಿಕ ನ್ಯಾಯಾಲಯಗಳು; ಕಾರ್ಮಿಕ ನ್ಯಾಯಾಲಯಗಳು ಮತ್ತು ಕೈಗಾರಿಕಾ ನ್ಯಾಯಮಂಡಳಿಗಳನ್ನು ದಿನಾಂಕ 15.4.2020 ರಿಂದ 3.5.2020 ರ ವರೆಗೆ ಮುಚ್ಚಲಾಗುವುದು. ಕಾಲಬದ್ಧ ಅಧಿನಿಯಮ 1963 ರ ನಿಯಮ 4 ರಡಿ ಈ ಅವಧಿಯಲ್ಲಿ ನ್ಯಾಯಾಲಯಗಳು ಮುಚ್ಚಲಾಗಿದೆ ಎಂದು ತಿಳಿಯತಕ್ಕಾಗಿದೆ.

2. ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆಯಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತುರ್ತು ಆದೇಶವಾಗಬೇಕಾದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೋಂದಾಯಿತ ಇ ಮೇಲ್ ವಿಳಾಸಕ್ಕೆ ಜ್ಞಾಪನಾ ಪತ್ರ (Memo) ಸಲ್ಲಿಸತಕ್ಕದ್ದು. ಸದರಿ ಜ್ಞಾಪನ ಪತ್ರದಲ್ಲಿ ಪ್ರಕರಣದ ತುರ್ತು ವಿಚಾರಣೆಗೆ ಅನಿವಾರ್ಯವಾದ ವಿವರಗಳನ್ನು ಹಾಗೂ ಸುಾಕ್ತ ಕಾರಣಗಳನ್ನು ಕಾಣಿಸಬೇಕು. ಪ್ರಧಾನ ಜಿಲ್ಲಾ ನ್ಯಾಯಾಧೀಶರು ಜ್ಞಾಪನಾ ಪತ್ರದ ವಿವರಗಳನ್ನು ಹಾಗೂ ಕಾರಣಗಳನ್ನು ಪರಾಂಬರಿಸಿ ಅತಿ ತುರ್ತಾಗಿ ವಿಚಾರಣೆಗೆ ಒಳಪಡಬೇಕಾದ ಪ್ರಕರಣವೆಂಬ ನಿಷ್ಕರ್ಷೆಗೆ ಬಂದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸದರಿ ಪ್ರಕರಣದ ವಿಚಾರಣೆ ನಡೆಸಲು ನಿರ್ದಿಷ್ಟ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಾರೆ. ಪ್ರಧಾನ ಜಿಲ್ಲಾ ನ್ಯಾಯಾಧೀಶರಿಂದ ನಾಮನಿರ್ದೇಶನಗೊಂಡ ತಾಂತ್ರಿಕ ಸಿಬ್ಬಂದಿಯವರು ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರಿಗೆ/ಪಕ್ಷಗಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸುಾಕ್ತ ಸೂಚನೆಗಳನ್ನು ನೀಡಲಿದ್ದಾರೆ.

3. ತುರ್ತಾಗಿ ಹೊಸ ಪ್ರಕರಣಗಳನ್ನು ದಾಖಲಿಸ ಬೇಕಾದಲ್ಲಿ ಅಥವಾ ಈಗಾಗಲೇ ದಾಖಲಾಗಿರುವ ಪ್ರಕರಣಗಳಲ್ಲಿ ತುರ್ತು ಆದೇಶ ಕೋರಿ ಮಧ್ಯಂತರ ಅಜಿ೯ಗಳನ್ನು ಸಲ್ಲಿಸಬೇಕಾದಲ್ಲಿ ಜ್ಞಾಪನಾ ಪತ್ರದ (Memo) ಮೂಲಕ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಇ -ಮೇಲ್ ಸಲ್ಲಿಸಬೇಕು. ತುರ್ತು ವಿಚಾರಣೆಗೆ ಸಕಾರಣಗಳು ಕಂಡು ಬಂದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸಂಬಂಧಪಟ್ಟ ವಕೀಲರಿಗೆ ಪಕ್ಷಗಾರರಿಗೆ *ಇ- ಫೈಲಿಂಗ್* ಮೂಲಕ ಪ್ರಕರಣವನ್ನು ದಾಖಲಿಸಲು ಸೂಕ್ತ ಸೂಚನೆಗಳನ್ನು ಇ -ಮೇಲ್ ಮೂಲಕ ನೀಡುತ್ತಾರೆ. ಇ- ಫೈಲಿಂಗ್ ಮಾಡಿದ ಬಳಿಕ ವಿಚಾರಣೆಗೆ ಹಾಜರಾಗಲು ದಿನಾಂಕವನ್ನು ನಿಗದಿಪಡಿಸಿ ಸಂಬಂಧಪಟ್ಟ ವಕೀಲರಿಗೆ ಪಕ್ಷಗಾರರಿಗೆ ಸೂಚನೆ ನೀಡಲಾಗುವುದು. ಪ್ರಧಾನ ಜಿಲ್ಲಾ ನ್ಯಾಯಾಧೀಶರಿಂದ ನಾಮನಿರ್ದೇಶನಗೊಂಡ ತಾಂತ್ರಿಕ ಸಿಬ್ಬಂದಿಯವರು ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರಿಗೆ ಪಕ್ಷಗಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಸೂಕ್ತ ಸೂಚನೆಗಳನ್ನು ನೀಡಲಿದ್ದಾರೆ.

4.ಕಂಡಿಕೆ 3 ಮತ್ತು 4 ರಡಿ ಸಲ್ಲಿಸಲಾದ ಜ್ಞಾಪನಾ ಪತ್ರದಲ್ಲಿ ಸಂಬಂಧಪಟ್ಟ ವಕೀಲರು/ ಪಕ್ಷಕಾರರು ತಮ್ಮ ಮೊಬೈಲ್ ನಂಬ್ರವನ್ನು ನಮೂದಿಸತಕ್ಕದ್ದು. ಎಲ್ಲಾ ಸೂಚನೆಗಳನ್ನು ಜ್ಞಾಪನಾ ಪತ್ರದಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಹಾಗೂ ಇ- ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು

5. ತುರ್ತು ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ನಡೆಸಲಾಗುವುದು. ಅನುಮತಿ ನೀಡಲಾದ ಪ್ರಕರಣಗಳ ತುರ್ತು ವಿಚಾರಣೆಗೆ ಕುರಿತಾದ ಅವಶ್ಯಕ ಸೂಚನೆಗಳನ್ನು ಸಂಬಂಧಪಟ್ಟ ವಕೀಲರಿಗೆ /ಪಕ್ಷಗಾರರಿಗೆ ತಿಳಿಸಲಾಗುವುದು.

6. ತುತು೯ ವಿಚಾರಣೆಗೆ ಸಂಬಂಧಪಟ್ಟ ಪ್ರಕರಣಗಳ ವಿಡಿಯೋ ಕಾನ್ಪರೆನ್ಸ್ ನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂರ್ವಾಹ್ನ 11 ರಿಂದ ಅಪರಾಹ್ನ 12.30 ರ ಅವಧಿಯೊಳಗೆ ನಡೆಸಲಾಗುವುದು. ಪ್ರಕರಣದ ಅನಿವಾರ್ಯತೆಯನ್ನು ಪರಿಗಣಿಸಿ ಇತರ ದಿನಗಳಲ್ಲಿ ಕೂಡ ವಿಚಾರಣೆ ನಡೆಸುವ ಕುರಿತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ನಿರ್ಧರಿಸುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಸಾರ್ವತ್ರಿಕ ರಜಾ ದಿನಗಳು ಬ೦ದಲ್ಲಿ ಮುಂದಿನ ಕೆಲಸದ ದಿನದಂದು ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ.

7. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದೇಶಿಕೆ ಶುಲ್ಕ (Process fee) ಮತ್ತು ನ್ಯಾಯಾಲಯ ಶುಲ್ಕ (Court fee) ಪಾವತಿಸುವ ಸಲುವಾಗಿ ಸಂಬಂಧಪಟ್ಟ ನ್ಯಾಯಾಲಯದ ಕಚೇರಿಯನ್ನು ಪ್ರತಿ ಮಂಗಳವಾರ ಮತ್ತು ಬುಧವಾರ ತೆರೆದಿಡುವ ಬಗ್ಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕ್ರಮಕೈಗೊಳ್ಳಲಿದ್ದಾರೆ. ನ್ಯಾಯಾಲಯವು ಮುಚ್ಚಿರುವ ಅವಧಿಯಲ್ಲಿ ದಾಖಲಿಸಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾತ್ರ ಪ್ರೊಸೆಸ ಫೀ ನೀಡಲು ಅವಕಾಶವಿದೆ. ಹಾಗೆಯೇ ನ್ಯಾಯಾಲಯವು ಮುಚ್ಚಿರುವ ಅವಧಿಯಲ್ಲಿ ಇ ಫೈಲಿಂಗ್ ಮೂಲಕ ನೋಂದಾಯಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾತ್ರ ಕೋರ್ಟ್ ಫೀ ಪಾವತಿಸಲು ಅವಕಾಶವಿದೆ.

8. ನ್ಯಾಯಾಲಯವು ಮುಚ್ಚಿರುವ ಅವಧಿಯಲ್ಲಿ ಕನಿಷ್ಠ ಸಿಬ್ಬಂದಿಗಳು ( skeletal staff) ನ್ಯಾಯಾಲಯಕ್ಕೆ ಹಾಜರಾಗುವ ಕುರಿತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು. ಪ್ರೊಸೆಸ ಫೀ ಮತ್ತು ಕೋರ್ಟ್ ಫೀ ಪಾವತಿಸಲು ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು /ಪಕ್ಷಗಾರರು ಮತ್ತು ವಕೀಲರ ಗುಮಾಸ್ತರು ಕಡ್ಡಾಯವಾಗಿ ಮುಖಗವಸು (face mask) ಧರಿಸತಕ್ಕದ್ದು. ನ್ಯಾಯಾಲಯದ ಕೊಠಡಿಗಳಲ್ಲಿ / ಫೈಲಿಂಗ್ ಕೌಂಟರ್ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಈ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಕೆಗೆ ಇಡತಕ್ಕದ್ದು.

9. ದಿನಾಂಕ 3.5.2020 ರ ವರೆಗೆ ವಿಚಾರಣೆಗೆ ನಿಗದಿಯಾಗಿರುವ ಪ್ರಕರಣಗಳು ತನ್ನಿಂದ ತಾನೇ ಮುಂದೂಡಲ್ಪಡುತ್ತವೆ. ಮುಂದೂಡಲ್ಪಟ್ಟ ದಿನಾಂಕಗಳನ್ನು ವೆಬ್ ಸೈಟ್ ಮತ್ತು ಸಿಐಎಸ್ ಪದ್ಧತಿಯಲ್ಲಿ ಪ್ರಕಟಿಸಲಾಗುವುದು.

10) ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 23.3.2020 ರಂದು ಸ್ವಯಂ ವಿಚಾರಣೆಗೆ ತೆಗೆದುಕೊಂಡ ರಿಟ್‍ ಪಿಟಿಷನ್ ನಲ್ಲಿ *(In Suo motu Writ Petition (Civil) No.3/2020 in re: Cognizance for extension of limitation)* ಹೊರಡಿಸಲಾದ ಆದೇಶದಲ್ಲಿ ವಕೀಲರು ಮತ್ತು ಪಕ್ಷಕಾರರು ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಸ್ವತಃ ಹಾಜರಾಗಿ ಯಾವುದೇ ಪ್ರಕರಣ ದಾಖಲಿಸುವ ಅಗತ್ಯವಿಲ್ಲ. ಹಾಗೂ ಕಾಲ ಬಾಧಿತ ನಿಯಮವನ್ನು ದಿನಾಂಕ 15.3.2020 ರಿಂದ ಮುಂದಿನ ಆದೇಶದ ವರೆಗೆ ವಿಸ್ತರಿಸಲಾಗಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ತಿಳಿಸಲಾಗಿದೆ.

11) ಈ ಅಧಿಸೂಚನೆಯು ಈ ಹಿಂದೆ ಹೊರಡಿಸಲಾದ ಎಲ್ಲಾ ಅಧಿಸೂಚನೆ/ಸೂಚನೆಗಳನ್ನು ಅತಿಕ್ರಮಿಸಿದ್ದು (Superseded) ಮುಂದಿನ ಅಧಿಸೂಚನೆ ಹೊರಡಿಸುವ ವರೆಗೆ ಊರ್ಜಿತದಲ್ಲಿರುತ್ತದೆ.

12) ದಿನಾಂಕ 13.4.2020 ರಂದು ಮಾನ್ಯ ಹೈಕೋರ್ಟ್ ನ ಪೂರ್ಣ ನ್ಯಾಯಾಲಯ ಸಭೆಯು ಕೈಗೊಂಡ ನಿರ್ಣಯದಂತೆ ಹೈಕೋರ್ಟಿಗೆ ಮತ್ತು ರಾಜ್ಯದ ಎಲ್ಲ ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ಮತ್ತು ಇತರ ವಿಚಾರಣಾ ನ್ಯಾಯಾಲಯಗಳಿಗೆ ಬೇಸಿಗೆ ರಜೆ ಇರುವುದಿಲ್ಲ.

ಮಾಹಿತಿಹಂಚಿಕೊಂಡವರು: ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡಿಶಿಯಲ್ ಸರ್ವೀಸ್ ಸೆಂಟರ್, ಮಂಗಳೂರು.

Comments are closed.