ಮಂಗಳೂರು,ಮಾರ್ಚ್.31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಇಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಸಾರ್ವಜನಿಕರಿಗೆ ದಿನನಿತ್ಯದ ಆಹಾರ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಮಂಗಳವಾರ ಮುಂಜಾನೆಯಿಂದಲೇ ಗ್ರಾಹಕರು ಆಹಾರ ಖರೀದಿಗೆ ಧಾವಿಸುತ್ತಿದ್ದು, ದಿನನಿತ್ಯದ ಆಹಾರ ಸಾಮಗ್ರಿಗಳ ಖರೀದಿಗೆ ನಗರದ ಹಲವು ದಿನಸಿ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಗಿದೆ.
ನಗರದ ವೆಲೆನ್ಸಿಯಾದಲ್ಲಿರುವ ಸೂಪರ್ ಮಾರ್ಕೆಟ್ ಮುಂದೆ ಮುಂಜಾನೆಯೆ ಆಹಾರ ಸಾಮಗ್ರಿ ಖರೀದಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸುಮಾರು ಒಂದು ಕಿ.ಮೀ.ದೂರದವರೆಗೂ ಸಾಲುಗಟ್ಟಿ ನಿಂತಿದ್ದಾರೆ.
ನಗರದ ಕೇಂದ್ರ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ. ಪೊಲೀಸರು ಅಲ್ಲಲ್ಲಿ ಬೀಡುಬಿಟ್ಟಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಅಧಿಕಾರಿಗಳ ಸೂಚನೆಗೆ ಯಾರೂ ಕಿವಿಗೊಡುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಪದೇ ಪದೇ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಂಡರೂ ಕೂಡ ಜನರು ಕೇಳಿಸಿ ಕೊಳ್ಳುತ್ತಿಲ್ಲ.
ಕೆಲವು ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು, ಗ್ರಾಹಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಖರೀದಿಯಲ್ಲಿ ತೊಡಗಿರುವುದರಿಂದ ಅಂಗಡಿ ಮಾಲಕರು, ಗ್ರಾಹಕರ ವರ್ತನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೊರೋನ ನೋಡಲ್ ಅಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





















Comments are closed.