ಕರಾವಳಿ

ಕರೋನಾ ಚಿಕಿತ್ಸೆ : ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಸಂಸದರ ಸೂಚನೆ

Pinterest LinkedIn Tumblr

ಮಂಗಳೂರು ಮಾರ್ಚ್ 25 : ಕರೋನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಚಿಕಿತ್ಸೆ ನೀಡುವ ಅವಧಿಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.

ಅವರು ಮಂಗಳವಾರ ವೆನ್‍ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಕರೋನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಚಿಕಿತ್ಸೆ ನೀಡುವ ನೂತನ ಆಯುಷ್ ಕಟ್ಟಡಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಕರೋನಾ ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ಇತರ ರೋಗಿಗಳ ಬಗ್ಗೆಯೂ ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಬಿದ್ದಲ್ಲಿ ವೆನ್‍ಲಾಕ್‍ನಲ್ಲಿರುವ ಇತರೆ ರೋಗಿಗಳನ್ನು ಅಗತ್ಯ ಬಿದ್ದಲ್ಲಿ ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲು ಅವರು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆ ದೊರಕಿಸಬೇಕು. ಆಯಾ ತಾಲೂಕಿನಲ್ಲಿರುವ ಖಾಸಗೀ ವೈದ್ಯರ ಸೇವೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.

ವೆನ್‍ಲಾಕ್ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಯಲ್ಲಿ ಯಾವುದೇ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಪ್ರತೀದಿನ ವೆನ್‍ಲಾಕ್ ಅಧೀಕ್ಷಕರು ಆಸ್ಪತ್ರೆಯ ಎಲ್ಲಾ ವಿಭಾಗ ಮುಖ್ಯಸ್ಥರ, ವೈದ್ಯರ ಸಭೆ ನಡೆಸಿ, ಸಮನ್ವಯತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಸರಕಾರದ ಉದ್ದೇಶವಾಗಿದ್ದು, ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲಾಗದು ಎಂದು ಅವರು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಸಂಸದರಿಗೆ ಕರೋನಾ ರೋಗಿಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವೆನ್‍ಲಾಕ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಯುಷ್ ಕಟ್ಟಡ ಹಾಗೂ ಸೂಪರ್ ಸ್ಪೆಷಾಲಿಟಿ ಬ್ಲಾಕ್‍ಗಳಲ್ಲಿ ಕರೋನಾ ಪೀಡಿತರ ಹಾಗೂ ಶಂಕಿತರ ಚಿಕಿತ್ಸೆಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಆಯುಷ್ ಕಟ್ಟಡದಲ್ಲಿ ಪ್ರತೀ ರೋಗಿಗೂ ಪ್ರತ್ಯೇಕ ಕೊಠಡಿಗಳಿರುವ 18 ಕೊಠಡಿಗಳನ್ನು ಕಾದಿರಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿಯೂ ಪ್ರತ್ಯೇಕವಾಗಿರುವ ಕೊಠಡಿಗಳನ್ನು ಕಾದಿರಿಸಲಾಗಿದೆ. ಶಂಕಿತ ರೋಗಿ ದಾಖಲಾದ ತಕ್ಷಣ, ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ, ಕೌನ್ಸಿಲಿಂಗ್ ಮಾಡಿ, ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, ಸಾಕಷ್ಟು ಮುನ್ನಚ್ಚರಿಕೆ ಮಾಹಿತಿ ನೀಡಿ, ಮನೆಯಲ್ಲಿ ನಿಗಾವಣೆಯಲ್ಲಿರಲು ತಿಳಿಸಿ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದರೆ, ಚಿಕಿತ್ಸೆಯನ್ನು ಅದೇ ಕೊಠಡಿಯಲ್ಲಿ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವೆನ್‍ಲಾಕ್ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ, ತನ್ನ ಗಮನಕ್ಕೆ ತರಬೇಕು. ಎಲ್ಲರೂ ಸಮನ್ವಯತೆ ಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ವೆನ್‍ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿದೇವಿ, ಡಿಸಿಪಿ ಲಕ್ಷ್ಮೀಗಣೇಶ್ ಮತ್ತಿತರರು ಇದ್ದರು.

Comments are closed.