ಮಂಗಳೂರು: ಪತ್ರಕರ್ತರು ನಿರಂತರ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕಗಳ ಓದುವಿಕೆಯಿಂದ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ನ್ಯೂಸ್ ಇಂಡಿಯಾ ಇದರ ಸಂಪಾದಕ ಸಂಜಯ್ ಸಿಂಗ್ ಹೇಳಿದರು.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ 35ನೆಯ ಪತ್ರಕರ್ತರ ಸಮ್ಮೇಳನದ ಎರಡನೆಯ ದಿನವಾದ ಭಾನುವಾರ ‘ಭಾರತೀಯ ಪತ್ರಿಕೋದ್ಯಮ’ ಗೋಷ್ಠಿಯಲ್ಲಿ ಮಾತನಾಡಿದರು.
ಇಂದಿನ ಮೊಬೈಲ್ ಯುಗದಲ್ಲಿ ಹೆಚ್ಚಿನ ಪತ್ರಕರ್ತರು ಮೊಬೈಲ್ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದು, ಓದಿನಿಂದ ವಿಮುಖರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಪತ್ರಿಕಾ ಧರ್ಮ ಕಾಪಾಡುವತ್ತ ಪ್ರಧಾನ ಆದ್ಯತೆ ನೀಡಬೇಕಾದ್ದು ಬಹುಮುಖ್ಯ. ಆದರೆ ಇಂದು ಅದಕ್ಕೆ ದಕ್ಕೆ ಉಂಟಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಂಜಯ್ ಸಿಂಗ್ ಹೇಳಿದರು.
ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿ, ಪತ್ರಕರ್ತರಿಗೆ ಹಿಂದೆ ಇದ್ದಷ್ಟು ಸ್ವಾತಂತ್ರ್ಯ ಈಗ ಇಲ್ಲ. ಮಾಲಕರ ಸುಪರ್ದಿಯಲ್ಲಿಯೇ ಸುದ್ದಿಗಳ ಆಯ್ಕೆಯಾಗುವ ಸನ್ನಿವೇಶವಿದೆ ಎಂದರು.
ಹಿಂದೆ ಸಂಪಾದಕೀಯದಲ್ಲಾದರೂ ನೇರವಾಗಿ ಬರೆಯುವ ಸ್ವಾತಂತ್ರ್ಯ ಇತ್ತು. ಈಗ ಅದಕ್ಕೂ ತಡೆಗಳು ಬರುತ್ತಿವೆ. ವ್ಯಾಪಾರಿ ಮನೊಧರ್ಮದಿಂದ ಮಾಧ್ಯಮ ಕ್ಷೇತ್ರ ಸೊರಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನೈತಿಕ ಹೊಣೆಗಾರಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ , ಬಿರ್ಸವಾಣಿ ಪತ್ರಿಕೆಯ ಪ್ರದಾನ ಸಂಪಾದಕ ಎಸ್.ಎಸ್.ಹಸ್ಸನ್ ಗೋಷ್ಠಿಯಲ್ಲಿ ಮಾತನಾಡಿದರು.



Comments are closed.