ಮಂಗಳೂರು, ಮಾ.08: ದೇಶವನ್ನು ಕಾಡುತ್ತಿರುವ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ ಇಂದು ಸುದ್ದಿ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರನ್ನೂ ಕಾಡುತ್ತಿದೆ. ಪತ್ರಕರ್ತ ತನ್ನ ವೃತ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದು, ಈ ಬಗ್ಗೆ ಟ್ರೇಡ್ ಯೂನಿಯನ್‍ನಡಿ ನೋಂದಾವಣೆಗೊಂಡಿರುವ ರಾಜ್ಯ ಪತ್ರಕರ್ತರ ಸಂಘ ಧ್ವನಿ ಎತ್ತಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸಲಹೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ನಡೆಯುತ್ತಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದಲ್ಲಿ `ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆಐ ಕುರಿತ ಗೋಷ್ಠಿಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತನೊಬ್ಬ ಇಂದು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವ ಪರಿಸ್ಥಿತಿ ಇಲ್ಲವಾಗಿದ್ದು, ತನ್ನ ವೃತ್ತಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಒಂದು ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮ ಸಾವಿನ ಮನೆ ತರ ಕಾಣುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತರು ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದು, ಅವರ ಕುಟುಂಬಗಳು ಒಡೆದು ಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವೃತ್ತಿಯ ಸವಾಲಿನ ಬಗ್ಗೆ ಮಾತುಗಳು ನಿರ್ದಯಿಯಾಗಿ ಕಾಣುತ್ತದೆ. ಜಗತ್ತಿನ ಇತರ ಎಲ್ಲಾ ಶೋಷಣೆಗಳ ಬಗ್ಗೆ ಮಾತನಾಡುವವರು ಇಂದು ತಮ್ಮ ಶೋಷಣೆ ಬಗ್ಗೆ ಮಾತನಾಡಲಾಗದ ಪರಿಸ್ಥಿತಿ ಇದೆ. ಈ ಬಗ್ಗೆ ಪತ್ರಕರ್ತರ ಸಂಘ ಧ್ವನಿ ಎತ್ತಬೇಕಾಗಿದೆ ಎಂದು ಅವರು ಹೇಳಿದರು.
ಜ್ಞಾನಭಂಡಾರವಿಂದು ಬೆರಳ ತುದಿಯಲ್ಲಿದೆ. ತಂತ್ರಜ್ಞಾನ ಮುಂದುವರಿದೆ. ಅದರ ಜತೆಯಲ್ಲೇ 35 ವರ್ಷಗಳ ಹಿಂದೆ ಪತ್ರಕರ್ತರು, ಮಾಧ್ಯಮಕ್ಕೆ ಇದ್ದ ಗೌರವ ಇಂದು ಇದೆಯೇ ಎಂದು ಪ್ರಶ್ನಿಸುವಂತಾಗಿದೆ. ಎಲ್ಲಾ ವೃತ್ತಿಗಳಂತೆ ಪತ್ರಿಕೋದ್ಯಮವೂ ಇಂದು ಉದ್ಯಮವಾಗಿದೆ. ಇಂದಿನ ಪತ್ರಿಕೋದ್ಯಮಕ್ಕೆ ಸುದ್ದಿ ಮುಖ್ಯವಾಗಿಲ್ಲ. ಗ್ರಾಹಕರು ಮುಖ್ಯವಾಗಿದ್ದಾರೆ. ರಾಜಕಾರಣಿಗಳು, ಉದ್ಯಮಿಗಳು ಇಂದು ಪತ್ರಿಕೋದ್ಯಮ ಪ್ರವೇಶಿಸುತ್ತಿದ್ದಾರೆ. ಉದ್ಯಮಿಗಳಿಗಿಂತಲೂ ರಾಜಕಾರಣಿಗಳ ಪತ್ರಿಕೋದ್ಯಮ ಪ್ರವೇಶ ಅಪಾಯಕಾರಿ ಬೆಳವಣಿ ಎಂದು ಅವರು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ ಇಲ್ಲದ ವೃತ್ತಿ ಅಪರಾಧ ಎಂದು ವಿಶ್ಲೇಷಿಸಿದ ಅವರು, ಸ್ವಾವಲಂಬಿಯಾಗಿ ಮಾಧ್ಯಮ ಹೇಗೆ ಕಟ್ಟಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ ಎಂದವರು ಹೇಳಿದರು.
ಟಿವಿ 9ನ ನಾ ವಿನಯ್ ಮಾತನಾಡಿ, ಮುದ್ರಣ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪತ್ರಕರ್ತರನ್ನು ನಿರ್ದಯವಾಗಿ ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಆರೇಳು ತಿಂಗಳ ಅವಧಿಯಲ್ಲಿ ಸುಮಾರು 300ರಷ್ಟು ಪತ್ರಕರ್ತರು ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ ಅವರು, ವೃತ್ತಿಯಿಂದ ಹೊರಬಂದ ಮೇಲೆ ಅವರನ್ನು ಯಾರೂ ಮಾತನಾಡಿಸದಂತಾಗಿದೆ. ಅನಗತ್ಯವಾಗಿ ಕೆಲಸ ಕಳೆದುಕೊಂಡವರಿಗೆ ಪತ್ರಕರ್ತರ ಸಂಘವು ಸಮ್ಮೇಳನದ ಮೂಲಕ ವೇದಿಕೆಯನ್ನು ಸೃಷ್ಟಿಸುವಂತಾಗಬೇಕು ಎಂದು ಅವರು ಹೇಳಿದರು.
ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ಕಂ.ಕ. ಮೂರ್ತಿ, ರವಿಕಾಂತ ಕುಂದಾಪುರ ಅವರು ಕೂಡಾ ಪತ್ರಕರ್ತರ ಸಂಕಷ್ಟಗಳ ಕುರಿತಂತೆಯೇ ಗೋಷ್ಠಿಯಲ್ಲಿ ಗಮನ ಸೆಳೆದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಗೋಷ್ಠಿಯನ್ನು ನಿರ್ವಹಿಸಿದರು.
Comments are closed.