ಮಂಗಳೂರು : ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಕದ್ರಿ ಪಾದೆಯ ಬಳಿ 50 ಲಕ್ಷದ ಬೃಹತ್ ಚರಂಡಿ ತಡೆಗೋಡೆ ಕಾಮಗಾರಿಗೆ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕದ್ರಿ ಉತ್ತರ ವಾರ್ಡಿನ ಕದ್ರಿ ಪಾದೆಯ ಪರಿಸರದ ನಿವಾಸಿಗಳ ಬಹು ದಿನದ ಬೇಡಿಕೆಯಾಗಿದ್ದ ತಡೆಗೋಡೆ ರಚನೆ ಕಾಮಗಾರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದೆ. ಈ ಪರಿಸರದ ಜನರ ಬಹು ದಿನದ ಬೇಡಿಕೆಯ ತೋಡಿನ ತಡೆಗೋಡೆ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಳೆಗಾಲದ ಸಂಧರ್ಭದಲ್ಲಿ ಈ ತೋಡಿನ ಮೂಲಕ ಹರಿದು ಹೋಗುವ ಮಳೆನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗುತ್ತಿತ್ತು. ಇಲ್ಲಿನ ಸಾರ್ವಜನಿಕರು ಮಳೆಗಾಲದ ಸಂಧರ್ಭದಲ್ಲಿ ಸಂಕಷ್ಟಪಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಈ ತೋಡಿನ ಒಂದು ಭಾಗದಲ್ಲಿ ಈಗಾಗಲೇ ತಡೆಗೋಡೆಯಿದೆ. ಇನ್ನೊಂದು ಭಾಗದಲ್ಲಿ ಸ್ವಲ್ಪ ಎತ್ತರವಾಗಿ ಈ ತಡೆಗೋಡೆ ನಿರ್ಮಾಣಗೊಳ್ಳುತ್ತದೆ. ತೋಡಿನಿಂದ ಉಕ್ಕಿ ಹರಿಯುವ ನೀರು ಮನೆಗಳಿಗೆ ನುಗ್ಗದಂತೆ ತಡೆಯಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಜನರ ಬೇಡಿಕೆಗಳನ್ನು ವಿಶೇಷವಾಗಿ ಪರಿಗಣಿಸಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗುತ್ತದೆ. ಹಾಗೂ ಮಂಗಳೂರಿನ ಕುರಿತು ವಿಶೇಷ ಪ್ರೀತಿ ಹೊಂದಿರುವ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ಸರಕಾರ ರಚನೆಯಾದ ಬಳಿಕ ನೂರಾರು ಕೋಟಿ ಅನುದಾನಗಳನ್ನು ನೀಡಿದ್ದಾರೆ. ಜನರ ಬೇಡಿಕೆಗಳನ್ನು ಪೂರೈಸಲು ಸರಕಾರವು ಬದ್ಧವಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸ್ಥಳೀಯ ಪಾಲಿಕೆ ಸದಸ್ಯೆ ಶಕಿಲಾ ಕಾವ ಅವರು ಮಾತನಾಡಿ, ಈ ಪರಿಸರದ ಬಹುದಿನದ ಬೇಡಿಕೆಯಾಗಿದ್ದ ತಡೆಗೋಡೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬಿಡುಗಡೆಗೊಳಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ವಾರ್ಡಿನ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು..
ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ.ಡಿ ಬಂಗೇರಾ, ಜಿಲ್ಲಾ ಕಾರ್ಯದರ್ಶಿ ಮಂಗಳ ಆಚಾರ್ಯ, ಪ್ರಮುಖರಾದ ರಾಮಕೃಷ್ಣ, ವೆಂಕಟೇಶ್, ಸಂಜೀವ ಅಡ್ಯಾರ್, ವಸಂತ್ ರಾವ್, ಚರಿತ್ ಪೂಜಾರಿ, ನೈನಾ ವಿಶ್ವನಾಥ್,ಸುಂದರ್ ಶೆಟ್ಟಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Comments are closed.