ಮಂಗಳೂರು, ಫೆಬ್ರವರಿ.15: ದುಬೈಯಿಂದ ಅಗಮಿಸಿ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆದ ವಿದ್ಯಮಾನವೊಂದು ಇಂದು ಬೆಳಗ್ಗೆ ಸಂಭವಿಸಿದೆ.
ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ದುಬೈನಿಂದ ಬಂದ ವಿಮಾನ ಮಂಗಳೂರಿನಲ್ಲಿ ಇಳಿಯಲಾಗದೆ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಬೆಂಗಳೂರಿನಿಂದ ಬರಬೇಕಾಗಿದ್ದ ವಿಮಾನವು ವಿಳಂಬವಾಗಿ ಮಂಗಳೂರಿಗೆ ಬಂದಿದೆ.
ಇಂದು ಮುಂಜಾನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ದಟ್ಟ ಮಂಜು ಅವರಿಸಿದ ಪರಿಣಾಮ ಮಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ಮತ್ತು ಲ್ಯಾಂಡಿಂಗ್ ಆಗುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ.ಮುಂಜಾನೆ ಏಳು ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ಪರಿಸರದಲ್ಲಿ ದಟ್ಟ ಮಂಜು ಕವಿದ ವಾತಾವರಣವಿತ್ತು.
ಸಚಿವ ಸುರೇಶ್ ಕುಮಾರ್ ಅವರು ಮಂಗಳೂರಿಗೆ ಬರಬೇಕಿದ್ದ ವಿಮಾನವು ತಡವಾಗಿ ಆಗಮಿಸಿದೆ. ಈ ಕುರಿತು ಸಚಿವರು ಟ್ವೀಟ್ ಮಾಡಿದ್ದು, ತಾನು ಮಂಗಳೂರಿಗೆ ಹೋಗಬೇಕಾದ Spicejet ವಿಮಾನ ಒಂದೂವರೆ ಗಂಟೆ ತಡವಾಗಿ ಹೊರಟಿದೆ. ಇದಕ್ಕೆ ಮಂಗಳೂರಿನಲ್ಲಿದ್ದ ವಿಪರೀತ ಮಂಜು ಕವಿದ ವಾತಾವರಣ ಎಂದು ಉಲ್ಲೇಖಿಸಿದ್ದಾರೆ. ಮಧ್ಯಾಹ್ನದ ಬಳಿಕ ವಿಮಾನ ನಿಲ್ದಾಣ ಪರಿಸರದಲ್ಲಿ ವಾತಾವರಣ ತಿಳಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.