ಕರಾವಳಿ

ಫೆ. 28ರಂದು ಮನಪಾ ಮೇಯರ್-ಉಪಮೇಯರ್ ಚುನಾವಣೆ : ಬಿಜೆಪಿಯ ದಿವಾಕರ ಪಾಂಡೇಶ್ವರ್‌ಗೆ ಮೇಯರ್ ಪಟ್ಟ?

Pinterest LinkedIn Tumblr

ಮಂಗಳೂರು, ಫೆಬ್ರವರಿ 12: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಇದೇ ಬರುವ ಫೆ. 28ರಂದು ನಡೆಯಲಿದೆ. ಈ ಮೂಲಕ ಮೇಯರ್ ಮೀಸಲಾತಿ ಗೊಂದಲದಿಂದ ಕಳೆದ ಮೂರು ತಿಂಗಳಿನಿಂದ ಬಾಕಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಚುನಾವಣೆಗೆ ಕೊನೆಗೂ ಕಾಲಕೂಡಿ ಬಂದಿದೆ.

2019ರ ನ.12ರಂದು ಪಾಲಿಕೆ ಚುನಾವಣೆ ನಡೆದು, ನ. 14ರಂದು ಫಲಿತಾಂಶ ಪ್ರಕಟವಾಗಿತ್ತು. ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಕಳೆದ ಅವಧಿಯಲ್ಲಿ ಪಾಲಿಕೆಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ 14 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಮೇಯರ್ ಮೀಸಲಾತಿ ಕುರಿತಂತೆ ಎದ್ದಿದ್ದ ಗೊಂದಲದ ಕಾರಣದಿಂದ ಮೂರು ತಿಂಗಳಿನಿಂದ ಮೇಯರ್-ಉಪ ಮೇಯರ್ ಆಯ್ಕೆ ನಡೆದಿರಲಿಲ್ಲ.

ಕಳೆದ ವಾರ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್‌ಗೆ 21ನೆ ಅವಧಿಯ ಮೀಸಲಾತಿಯಡಿ ಚುನಾವಣೆ ನಡೆಸುವಂತೆ ರಾಜ್ಯ ಸರಕಾರ ಪಾಲಿಕೆಗೆ ಸೂಚನೆ ನೀಡಿದ್ದರಿಂದ ಚುನಾವಣೆಗೆ ದಿನಾಂಕ ನಿಗದಿಪಡಿಸಲು ಕೋರಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು.

ಇದೀಗ ಪ್ರಾದೇಶಿಕ ಆಯುಕ್ತರು ಫೆ.28ಕ್ಕೆ ಮೇಯರ್-ಉಪ ಮೇಯರ್ ಚುನಾವಣೆ ನಡೆಸುವ ಬಗ್ಗೆ ಮಂಗಳೂರು ಪಾಲಿಕೆ ಆಯುಕ್ತರಿಗೆ ಮಂಗಳವಾರ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಪಾಲಿಕೆಯ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ತಿಳಿಸಿದ್ದಾರೆ.

ಅಂದು ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಪಾಲಿಕೆಗೆ ಹೊಸದಾಗಿ ಆಯ್ಕೆಯಾದ 60 ಕಾರ್ಪೊರೇಟರ್‌ಗಳ ಪ್ರಮಾಣ ವಚನ ಸ್ವೀಕಾರ ಆರಂಭದಲ್ಲಿ ನಡೆಯಲಿದ್ದು, ಪಾಲಿಕೆ ನೂತನ ಪರಿಷತ್ ಅಸ್ತಿತ್ವಕ್ಕೆ ಬರಲಿದೆ. ನಂತರ ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ. ಬಳಿಕ ಅಗತ್ಯವಿದ್ದರೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ.

ಬಿಜೆಪಿಯ ದಿವಾಕರ ಪಾಂಡೇಶ್ವರ್‌ಗೆ ಮೇಯರ್ ಪಟ್ಟ?

ದಿವಾಕರ ಪಾಂಡೇಶ್ವರ್‌

ಪಾಲಿಕೆಯಲ್ಲಿ ಬಹುಮತ ಪಡೆದಿರುವ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಪರ್ಧಿಸಲಿದ್ದಾರೆ. ಮೇಯರ್ ಸ್ಥಾನಕ್ಕೆ 46ನೆ ಕಂಟೋನ್ಮೆಂಟ್ ವಾರ್ಡ್‌ನ ಬಿಜೆಪಿಯ ದಿವಾಕರ ಪಾಂಡೇಶ್ವರ ಬಹುತೇಕವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಉಳಿದಂತೆ, ಕಾರ್ಪೊರೇಟರ್‌ಗಳಾದ ಶರತ್, ಜಯಾನಂದ ಅಂಚನ್ ಸೇರಿದಂತೆ ಹಲವರ ಹೆಸರು ಕೂಡ ಕೇಳಿ ಬರುತ್ತಿದೆ.

Comments are closed.