ಕರಾವಳಿ

ನಕಾರಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ದುಷ್ಪರಿಣಾಮ – ಧನಾತ್ಮಕ ಚಿಂತನೆಯಿಂದ ಸತ್ಪರಿಣಾಮ: ರಾಜಯೋಗಿನಿ ಬಿ.ಕೆ. ಶಿವಾನಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 10: ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ಫೆಬ್ರವರಿ 9ರಂದು ನಗರಕ್ಕೆ ಆಗಮಿಸಿದ್ದು, ನಗರದ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನಲ್ಲಿ ಶಿವಾನಿಯವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಂಗಳೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವತಿಯಿಂದ ಕೊಡಿಯಾಲ್‌ಬೈಲ್ ಟಿಎಂಎ ಪೈ ಇಂಟರ್‌ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ರವಿವಾರ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಶಿವಾನಿಯವರು ಬೆಳಿಗ್ಗೆ ಆರೋಗ್ಯ, ಸಂತೋಷ ಮತ್ತು ಸಾಮರಸ್ಯ (Health Happiness and Harmony) ಎಂಬ ವಿಷಯದ ಮೇಲೆ ಹಾಗೂ ಸಾಯಂಕಾಲ “Pause…for Peace” ಎನ್ನುವ ವಿಷಯದಲ್ಲಿ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.

ಮನುಷ್ಯನ ಚಿಂತನೆಗಳು ಆತನ ಜೀವನಕ್ರಮವನ್ನು ನಿರ್ಧರಿಸುತ್ತವೆ. ಸಕಾರಾತ್ಮಕ ಚಿಂತನೆ ಗಳು ಬದುಕಿನಲ್ಲಿ ಸಂತೋಷ, ಆರೋಗ್ಯ, ಆತ್ಮಶಕ್ತಿಯೊಂದಿಗೆ ಸಂತೃಪ್ತಿಯ ಸಾರ್ಥಕ ಜೀವನಕ್ಕೆ ಕಾರಣ ವಾಗುತ್ತವೆ ಮತ್ತು ಸುಂದರ ಪರಿಸರ ಮತ್ತು ಸಮಾಜಕ್ಕೆ ಪೂರ ಕವಾಗುತ್ತದೆ. ಜೀವನದ ಪ್ರತಿಕ್ಷಣವೂ ಮನಸ್ಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಅಳವಡಿಸುವುದರಿಂದ ದೇಹದ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುವುದನ್ನು ಸಾಧ್ಯವಾಗಬಹುದು. ಧನಾತ್ಮಕ ಚಿಂತನೆಗಳೇ ಯಶಸ್ಸಿನ ಗುಟ್ಟು ಎಂದು ಆಧ್ಯಾತ್ಮಿಕ ಮಾರ್ಗದರ್ಶಕಿ, ಪ್ರಶಿಕ್ಷಕಿ ಪ್ರಸಿದ್ಧ ವಾಗ್ಮಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿನಿ ಬಿ.ಕೆ. ಶಿವಾನಿ ಹೇಳಿದರು.

ನಕಾರಾತ್ಮಕ ಚಿಂತನೆಗಳು ಚಿಂತೆ, ಅಧೈರ್ಯ, ಅಭದ್ರತೆ, ಅಪನಂಬಿಕೆ ಯನ್ನು ಹುಟ್ಟು ಹಾಕಿ ಜೀವನವನ್ನು ಅಧಃಪತನದತ್ತ ಕೊಂಡೊಯ್ಯುತ್ತವೆ ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುತ್ತವೆ. ಮನುಷ್ಯ ಧನಾತ್ಮವಾಗಿದ್ದಷ್ಟು ಸಂತೋಷದ ಸೂಚ್ಯಾಂಕದಲ್ಲಿ ಏರಿಕೆ ಕಾಣಬಹುದು. ಅದೇ ರೀತಿ ಪ್ರತಿ ಋಣಾತ್ಮಕ ವಿಷಯಗಳಿಗೆ ಸೂಚ್ಯಾಂಕ ಇಳಿಯುತ್ತದೆ. ಟಿವಿ-ಮೊಬೈಲ್ ಮೊದಲಾದ ಋಣಾತ್ಮಕ ಪರಿಣಾಮ ಬೀರುವ ಮಾಧ್ಯವಮಗಳಿಗೆ ಸಾಧ್ಯವಾದಷ್ಟು ಕಡಿವಾಣ ಹಾಕುವುದು ಇಂದಿನ ಜೀವನ ಶೈಲಿಯಲ್ಲಿ ಅತೀ ಅವಶ್ಯವಾಗಿದೆ. ನಿದ್ದೆಯಿಂದ ಎದ್ದ ನಂತರ ಒಂದು ಗಂಟೆ ಮತ್ತು ನಿದ್ದೆ ಮಾಡುವ ಒಂದು ಗಂಟೆ ಮೊದಲು ಈ ಮಾಧ್ಯಮಗಳಿಂದ ದೂರವೇ ಇರಬೇಕು. ಆಹಾರ ಸೇವನೆ ಸಂದರ್ಭವೂ ಇವುಗಳಿಂದ ದೂರವಿರಬೇಕು ಎಂದು ಬಿ.ಕೆ. ಶಿವಾನಿ ನುಡಿದರು.

ನಾನು ಸಂತೋಷವಾಗಿದ್ದೇನೆ; ನಾನು ಆರೋಗ್ಯವಾಗಿದ್ದೇನೆ ಎಂಬ ಆಲೋಚನೆಗಳು ಧನಾತ್ಮಕ ಶಕ್ತಿಯ ಕಂಪನಗಳನ್ನು ಸೃಷ್ಟಿಸುತ್ತವೆ. ಬದುಕಿನ ಮೂಲಸತ್ವಗಳನ್ನು ಪೋಷಿಸದಿದ್ದರೆಜೀವನ ಮೌಲ್ಯಗಳು ನಶಿಸುತ್ತವೆ. ಯುವಜನತೆಯಲ್ಲಿ ಆತ್ಮವಿಶ್ವಾಸ ಕುಸಿಯಲು ಮೂಲಸತ್ವಗಳನ್ನು ಅವಗಣಿಸಿರುವುದೇ ಕಾರಣ ಎಂದರು.

ಇನ್ನೊಬ್ಬರ ತೆಗಳಿಕೆ, ನಿಂದನೆ, ಅಗೌರವಗಳಿಂದ ವಿಚಲಿತರಾಗದೆ ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಂಡಾಗ ಅಲ್ಲಿ ಅಸಂತೋಷ, ಖನ್ನತೆ, ಒತ್ತಡ ಮತ್ತು ಅಧೀರತೆಗೆ ಅವಕಾಶವಿರುವುದಿಲ್ಲ. ನಿಂದನೆಯ ಮಾತುಗಳಿಗೆ ಪ್ರತಿಕ್ರಿಯಿ ಸಲು ಹೊರಟರೆ ನಮ್ಮ ಸಂತೋಷವೂ ಹಾಳಾಗುತ್ತದೆ. ಸಂತೋಷ ಹಾಳಾದರೆ ಆರೋಗ್ಯ ಹಾಳಾಗುತ್ತದೆ ಎಂದವರು ವಿವರಿಸಿದರು.

ಪ್ರಸ್ತುತ ನಮ್ಮ ಆಹಾರ ಸೇವನೆಯಲ್ಲೂ ಧಾವಂತ ಆವರಿಸಿದೆ. ಬೆಳಗಿನ ಉಪಾಹಾರವನ್ನು ಓಡುತ್ತಲೇ ಸೇವಿಸುತ್ತೇವೆ. ಮಧ್ಯಾಹ್ನದ ಊಟ ವ್ಯವಹಾರದ ಜತೆಗೆ (ಲಂಚ್‌ ವಿದ್‌ ಬಿಸಿನೆಸ್‌ ಮೀಟ್‌) ನಡೆಯುತ್ತದೆ. ರಾತ್ರಿಯ ಊಟ ಮೊಬೈಲ್‌/ಟಿವಿ ಜತೆಗೆ ಸಾಗುತ್ತದೆ. ನಮ್ಮ ಬದುಕಿನ ತಲ್ಲಣಗಳಿಗೆ ಇವುಗಳು ಕೂಡ ಕಾರಣ. ಊಟವನ್ನು ಕೂಡ ಧ್ಯಾನವಾಗಿ ಪರಿಗಣಿಸಬೇಕು. ಮನೆಯೂಟಕ್ಕೆ ಮಿಗಿಲಾದುದು ಇಲ್ಲ ಎಂದು ಶಿವಾನಿ ತಿಳಿಸಿದರು.

ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾ ದೇವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕುಮಾರಿ ರೇವತಿ ಅವರು ಶಿವಾನಿ ಅವರನ್ನು ಪರಿಚಯಿಸಿದರು. ಮಂಗಳೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿ ಸ್ವಾಗತಿಸಿದರು.

Comments are closed.