ಕರಾವಳಿ

ಮಂಗಳೂರು ಏರ್‌ಪೋರ್ಟ್ ಬಾಂಬ್ ಪ್ರಕರಣ: ಆರೋಪಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಕರೆತಂದ ಪೊಲೀಸರು – ನಾಳೆ ನ್ಯಾಯಾಲಯಕ್ಕೆ ಹಾಜರು

Pinterest LinkedIn Tumblr

ಮಂಗಳೂರು / ಬೆಂಗಳೂರು, ಜನವರಿ.22: ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ನೀಲಮಣಿ ಎನ್. ರಾಜು ಅವರ ಕಚೇರಿಗೆ ಬಂದು ಶರಣಾಗಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್‌ನನ್ನು ಬೆಂಗಳೂರು ಪೊಲೀಸರು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟ ಪ್ರಕರಣದ ಆರೋಪಿ ಎನ್ನಲಾದ ಉಡುಪಿ ಮೂಲದ ಆದಿತ್ಯ ರಾವ್ ಬುಧವಾರ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿ ಶರಣಾಗಿರುವುದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದರು.

ಇದೀಗ ಆರೋಪಿಯನ್ನು ನ್ಯಾಯಾಲಯದ ಅನುಮತಿ ಪಡೆದ ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ಹಾಗೂ ವಿನಯ ಗಾಂವ್‌ಕರ್ ಅವರ ನೇತೃತ್ವದ ತಂಡ ಹಲಸೂರು ಗೇಟ್ ಠಾಣೆಯಲ್ಲಿ ವಶಕ್ಕೆ ಪಡೆದಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಮಂಗಳೂರು ಕರೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆರೋಪಿ ಆದಿತ್ಯ ರಾವ್‌ನನ್ನು ತನಿಖಾ ಧಿಕಾರಿಗಳು ಮಂಗಳೂರಿಗೆ ಕರೆದೊಯ್ದಿದ್ದಾರೆ. ಅಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುತ್ತದೆಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಯಾವೂದೇ ಮಾಹಿತಿಯನ್ನು ಪ್ರಕಟಪಡಿಸದೇ ಗುರುವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಟಿಗೆ ಮಾಧ್ಯಮದವರನ್ನು ಅಹ್ವಾನಿಸಿದ್ದಾರೆ.

ಮಂಗಳೂರಿನ ಕುಡ್ಲ ಕ್ವಾಲಿಟಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿ ಆರೋಪಿ .?

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಆರೋಪಿ ಆದಿತ್ಯರಾವ್‌ ಮಂಗಳೂರು ಕುಡ್ಲ ಕ್ವಾಲಿಟಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು ಚಿಲಿಂಬಿಯಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಕಳೆದ ಎರಡು ತಿಂಗಳಿನಿಂದ ನಗರದ ಬಲ್ಮ್ಠಠದಲ್ಲಿರುವ ಕುಡ್ಲ ಕ್ವಾಲಿಟಿ ಹೊಟೇಲ್‌ನ ಬಾರ್ ಅಂಡ್ ರೆಸ್ಟೋರೆಂಟ್ ವಿಭಾಗದಲ್ಲಿ ಬಿಲ್ಲಿಂಗ್‌ನ ಕೆಲಸ ಮಾಡುತ್ತಿದ್ದ ಆರೋಪಿ ಆದಿತ್ಯರಾವ್‌ ಯಾರೊಂದಿಗೂ ಮಾತನಾಡದೇ ಒಂಟಿಯಾಗಿ ಇರುತ್ತಿದ್ದ ಎಂದು ಮಾಹಿತಿ ಲಭಿಸಿದೆ.

ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳೂರು ಮೈಸೂರು, ಶಿವಮೊಗ್ಗ, ಹಾಸನ, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಯ ಶೋಧ ಕಾರ್ಯಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಆತನೇ ಪೊಲೀಸರಿಗೆ ಬೆಂಗಳೂರಿನಲ್ಲಿ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಆತ ಉಡುಪಿ ಮೂಲದವನಾಗಿದ್ದು 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್‌ ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ, ಬಂಧನಕ್ಕೆ ಒಳಗಾಗಿದ್ದ ಹಿನ್ನಲೆಯಲ್ಲಿ ಆತನ ಪೋಷಕರು ಮಂಗಳೂರಿನಲ್ಲಿ ನೆಲೆಸಿದ್ದರು.

ಆದಿತ್ಯ ರಾವ್ ತಂದೆ ಕೃಷ್ಣಮೂರ್ತಿ ಮಂಗಳೂರಿನ ಉರ್ವಾ ಚಿಲಿಂಬಿ ಎಂಬಲ್ಲಿ ವಾಸವಾಗಿದ್ದು ಆದಿತ್ಯರಾವ್‌ ಕಿರಿಯ ಸಹೋದರ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಹಿನ್ನಲೆಯಲ್ಲಿ ಬ್ಯಾಂಕ್‌ ವತಿಯಿಂದ ಅಪಾರ್ಟ್ ಮೆಂಟ್ ನೀಡಲಾಗಿದೆ ಎನ್ನಲಾಗಿದೆ.

ಪೊಲೀಸ್ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದ ಆರೋಪಿ ಸಹೋದರ :

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣದಲ್ಲಿ ಪೋಲಿಸರಿಗೆ ಶರಣಾಗಿರುವ ಆರೋಪಿ ಆದಿತ್ಯ ರಾವ್‌ ಸಹೋದರ ಪೊಲೀಸರಿಗೆ ತನಿಖೆ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ನಮಗೆ ಆತನ ಯಾವುದೇ ಸಂಪರ್ಕವಿಲ್ಲ. ಕಳೆದ ವರ್ಷ ಆತ ಜೈಲಿಗೆ ಹೋದ ಸಂದರ್ಭದಲ್ಲೂ ನಾವು ಆತನ ಸಂಪರ್ಕ ಮಾಡಿರಲಿಲ್ಲ. ಕಳೆದ ವರ್ಷ ತಾಯಿ ತೀರಿಕೊಂಡಿದ್ದು ಆ ವಿಚಾರವನ್ನು ನಾವು ಜೈಲಿಗೆ ಕರೆ ಮಾಡಿ ತಿಳಿಸಿದ್ದೇವೆ. ಆದರೆ ಆತ ಬಂದಿಲ್ಲ” ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ನಾವು ಪೊಲೀಸರಿಗೆ ಸಹಕಾರ ನೀಡುತ್ತೇವೆ ಎಂದು ಆರೋಪಿ ಆದಿತ್ಯ ರಾವ್‌ನ ಸಹೋದರ ಮಾಧ್ಯಮದವರಲ್ಲಿ ತಿಳಿಸಿದ್ದಾರೆ.

ಎಸಿಪಿ ಬೆಳ್ಳಿಯಪ್ಪ, ವಿನಯ್ ಗಾಂವ್ಕರ್ ನೇತೃತ್ವದ ಐದು ಅಧಿಕಾರಿಗಳ ತನಿಖಾ ತಂಡ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದು, ಮಂಗಳೂರು ಪೊಲೀಸರಿಗೆ ಸಂಬಂಧಿಸಿದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.