ಕರಾವಳಿ

ದ.ಕನ್ನಡದಲ್ಲಿ 91.50% ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ – ಲಸಿಕೆ ಹಾಕದ ಮಕ್ಕಳಿಗೆ ಲಸಿಕೆ ಹಾಕಿಸಲು ಮನವಿ

Pinterest LinkedIn Tumblr

ಮಂಗಳೂರು ಜನವರಿ 21: ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಎರಡನೇ ದಿನವಾದ ಸೋಮವಾರ ಜಿಲ್ಲೆಯಲ್ಲಿ 13249 ಮಕ್ಕಳಿಗೆ ಲಸಿಕ್ ಹಾಕಲಾಗಿದೆ.ಭಾನುವಾರ ನಡೆದ ಬೂತ್ ಮಟ್ಟದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಲಸಿಕೆ ಹಾಕದ 5 ವರ್ಷದೊಳಗಿನ ಮಕ್ಕಳಿಗೆ ಸೋಮವಾರ ನಡೆದ ಮನೆ ಮನೆಗೆ ತೆರಳಿ ಲಸಿಕಾ ಅಭಿಯಾನದಲ್ಲಿ ಈ ಲಸಿಕೆ ನೀಡಲಾಯಿತು. ಎರಡೂ ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 91.50% ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ದ.ಕ. ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆರೋಗ್ಯ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ, ಇತರ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಸಹಕಾರದಿಂದ ಜಿಲ್ಲೆ ಪೋಲಿಯೋ ರೋಗದಿಂದ ಮುಕ್ತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದ.ಕ. ಜಿಪಂ ಸಿಇಒ ಸೆಲ್ವಮಣಿ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಧನಲಕ್ಷ್ಮೀ, ಲೇಡಿಗೋಷನ್ ಅಧೀಕ್ಷಕಿ ಡಾ.ಸವಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ರಾಜೇಶ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ರೋಟರಿ 3181ರ ಚೇರ್‌ಮೆನ್ ಡಾ.ನೋರ್ಮನ್ ಮೆಂಡೋನ್ಸಾ, ರೋಟರಿ ಮಂಗಳೂರು ಉತ್ತರ ಅಧ್ಯಕ್ಷ ನಯನ ಕುಮಾರ್, ವೈದ್ಯರಾದ ಡಾ. ಸತೀಶ್ಚಂದ್ರ, ಡಾ.ಮುಹಮ್ಮದ್, ಡಾ.ದುರ್ಗಾಪ್ರಸಾದ್, ಡಾ.ಬಾಲಕೃಷ್ಣ ಸೇರಿದಂತೆ ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯರು, ಸಿಬಂದಿವರ್ಗದವರು ಭಾಗವಹಿಸಿದ್ದರು.

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಪುತ್ರಿ 1 ವರ್ಷ 9 ತಿಂಗಳಿನ ಶ್ರೇಯಾ ಮತ್ತು ಜಿಪಂ ಸಿಇಒ ಸೆಲ್ವಮಣಿ ಅವರ ಪುತ್ರ 4 ವರ್ಷ 4 ತಿಂಗಳಿನ ಶಾಸ್ವಿನ್ ನವಲ್ ಅವರಿಗೂ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ ಹಾಕಲಾಯಿತು.

ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಮನವಿ :

ರಾಷ್ಟ್ರೀಯ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮದಂದು ಬೂತ್ ಕಾರ್ಯ ಚಟುವಟಿಕೆಯಲ್ಲಿ ಜಿಲ್ಲೆಯ 148817 ಮಕ್ಕಳಲ್ಲಿ 122856, 0-5 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಎರಡು ದಿನಗಳು ಮತ್ತು ನಗರ ಪ್ರದೇಶಗಳಲ್ಲಿ ಮೂರು ದಿನಗಳು ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೂತ್ ದಿನದಿಂದು ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಮನೆ ಭೇಟಿ ಕಾರ್ಯಕ್ರಮದ ದಿನಗಳಂದು ಆರೋಗ್ಯ ಇಲಾಖೆಯವರು ಬಂದಾಗ ಮಕ್ಕಳಿಗೆ ಲಸಿಕೆ ಹಾಕಿಸಲು ಹೆತ್ತವರು ಅಥವಾ ಪೋಷಕರಲ್ಲಿ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಶಿಶು ಕಲ್ಯಾಣ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇನ್ನೂ ಎರಡು ದಿನಗಳ ಕಾಲ ಈ ಲಸಿಕಾ ಅಭಿಯಾನ ನಡೆಯಲಿದ್ದು, ಲಸಿಕೆ ಹಾಕದ ಮಕ್ಕಳಿಗೆ ಈ ಸಂದರ್ಭದಲ್ಲಿ ಹಾಕಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಮಕ್ಕಳ ಪೋಷಕರಲ್ಲಿ ವಿನಂತಿಸಿದ್ದಾರೆ.

Comments are closed.