ಮಂಗಳೂರು,ಡಿಸೆಂಬರ್. 24 ; ಮೂಡಬಿದ್ರೆ ಕೋಟಿ-ಚೆನ್ನಯ ಕಂಬಳ ಉತ್ಸವ ಹಾಗೂ ವೀರರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ ಸಮಾರಂಭ ನಾಳೆ ಡಿಸೆಂಬರ್ ೨೫ರಂದು ನಡೆಯಲಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ವೀರರಾಣಿ ಅಬ್ಬಕ್ಕ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮೂಡಬಿದ್ರೆ ಕಡಲಕೆರೆ ನಿಸರ್ಗಧಾಮದಲ್ಲಿ 17ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ್ಯ ಉತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಂಬಳ ಆವರಣದಲ್ಲಿ ನಿರ್ಮಾಣಗೊಂಡಿರುವ ವೀರರಾಣಿ ಅಬ್ಬಕ್ಕ ಪ್ರತಿಮೆಯನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ.
ಈ ಕಂಬಳ ಕ್ರೀಡಾಕೂಟಕ್ಕೆ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯಿಂದ 5 ಲಕ್ಷ ರೂ. ಬಿಡುಗಡೆ ಆಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಚಿವರಾದ ಆರ್. ಅಶೋಕ್, ಸಿ.ಟಿ. ರವಿ ಮತ್ತಿತರರು ಭಾಗವಹಿಸಲಿದ್ದಾರೆ.
ಮೂಡಬಿದ್ರೆ ಕಡಲಕೆರೆಯನ್ನು ಪಿಲಿಕುಲ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ರೂ. ಮೊತ್ತದ ಯೋಜನೆ ಜಾರಿಗೆ ತರಲು ಈಗಾಗಲೇ ರೂಪುರೇಷೆ ಸಿದ್ಧಗೊಳಿಸಲಾಗಿದೆ. ಇದರಲ್ಲಿ ಕಡಲಕೆರೆ ಅಭಿವೃದ್ಧಿಗೆ ರೂ. 3 ಕೋಟಿ ಹಾಗೂ ಅಬ್ಬಕ್ಕ ಸಂಸ್ಕೃತಿ ಗ್ರಾಮ ನಿರ್ಮಾಣಕ್ಕೆ ರೂ. 2 ಕೋಟಿ ವೆಚ್ಚ ಮಾಡಲಾಗುವುದು.
ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಮೂಡಬಿದ್ರೆ ಹಾಗೂ ಮೂಲ್ಕಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಹಾಗೂ ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದ್ದಾರೆ.

Comments are closed.