ಕರಾವಳಿ

ಸಾರ್ವಜನಿಕರಿಗೆ ತೊಂದರೆಯಾಗದಂತೆ ಮರಳು ಪೂರೈಕೆ ಮಾಡಲು ಸಚಿವರ ಸೂಚನೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 17 : ಸಾರ್ವಜನಿಕರಿಗೆ ಸುಲಭವಾಗುವ ರೀತಿಯಲ್ಲಿ ಮರಳು ಪೂರೈಕೆ ಆಗಬೇಕು. ಇದರಿಂದ ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ, ಕಷ್ಟಗಳಾಗಬಾರದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

ಸರಕಾರದಿಂದ ನೀಡಬೇಕಾದ ಸೌಲಭ್ಯವನ್ನು ಒದಗಿಸಿಕೊಡಲಾಗುವುದು, ಸರಕಾರಿ ಕಾಮಗಾರಿಗಳಿಗೆ ಸಕಾಲದಲ್ಲಿ ಮರಳು ಪೂರೈಕೆಯಾಗಿ ಕಾಮಗಾರಿಗಳನ್ನು ಆದಷ್ಟು ಕನಿಷ್ಟ ಸಮಯದಲ್ಲಿ ಪೂರ್ತಿಗೊಳಿಸುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ಕಾಯ್ದಿರಿಸಿ, 2,3 ದಿನಗಳೊಳಗೆ ಮರಳು ದೊರಕದೇ ಇದ್ದಲ್ಲಿ ಈ ಕುರಿತು ಸಾರ್ವಜನಿಕರು ದೂರು ನೀಡಬಹುದು. ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ಯೋಜನೆಗಳು ಸಕ್ರಿಯವಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಜಿಲ್ಲಾ ಖನಿಜ ಪ್ರತಿಷ್ಠಾನ ನಿಧೀಯಲ್ಲಿ ರೂ. 4.62 ಕೋಟಿ ಮೊತ್ತ ಲಭ್ಯವಿದ್ದು, ಇದನ್ನು ಗಣಿಗಾರಿಕೆಯಿಂದ ತೊಂದರೆಗೀಡಾದ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗುವುದು. ಆಯಾ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸುವಂತೆ ಸಚಿವರು ಸೂಚಿಸಿದರು.

ಡಿ.ಎಂ.ಎಫ್ ಖಾತೆಯಲ್ಲಿ ಲಭ್ಯವಿರುವ ಮೊತ್ತವನ್ನು ವಿವಿಧ ಕಾಮಗಾರಿ ಕೆಲಸಗಳಿಗೆ ಹಂಚಿಕೆ ಮಾಡಲಾಗಿರುತ್ತದೆ. ಸಮಿತಿ ಸಭೆಯ ತೀರ್ಮಾನದಂತೆ ವಿಧಾನ ಸಭಾ ಕ್ಷೇತ್ರಕ್ಕೆ ಅನುಗುಣವಾಗಿ ಕಾಮಗಾರಿ ಹಾಗೂ ಅನುದಾನದ ಮೊತ್ತವನ್ನು ಹಂಚಿಕೆ ಮಾಡಲಾಗಿದ್ದು, ಸಂಬಂಧಪಟ್ಟ ವಿಧಾನ ಸಭಾ ಶಾಸಕರಿಗೆ ಕಳುಹಿಸಿಕೊಡಲಾಗಿರುತ್ತದೆ. ತಮ್ಮ ಕ್ಷೇತ್ರಗಳಿಗೆ ಅಗತ್ಯವಿರುವ ಕಾಮಗಾರಿಗಳ ಪಟ್ಟಿಯನ್ನು ಸಭೆಯ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಹಾನಗರಪಾಲಿಕೆ ಆಯುಕ್ತ ಅಜಿತ್ ಹೆಗ್ಡೆ, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು

Comments are closed.