ಕರಾವಳಿ

ಹದಿನಾರರ ಸಂಭ್ರಮದಲ್ಲಿ ದ್ವೀಪದ ಬಿಲ್ಲವರ ಸಂಘಟನೆಯಾದ “ಬಹರೈನ್ ಬಿಲ್ಲವಾಸ್” . ಅರ್ಥಪೂರ್ಣ ಆಚರಣೆಗೆ ಸಿದ್ಧತೆ . “ತುಳುವ ಸಂಭ್ರಮ-2019 ” ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ

Pinterest LinkedIn Tumblr

ಬಹರೈನ್ : ಇಲ್ಲಿ ನೆಲೆಸಿರುವ ಅನಿವಾಸಿ ಬಿಲ್ಲವರ ಸಂಘಟನೆಯಾದ ‘ಬಹರೇನ್ ಬಿಲ್ಲವಾಸ್ ” ಈಗ ಹದಿನಾರರ ಸಂಭ್ರಮ . ಬಿಲ್ಲವ ಸಮುದಾಯದ ಕಷ್ಟ ನಷ್ಟಗಳಿಗೆ ಸ್ಪಂದಿಸಲೆಂದೇ ಒಂದೂವರೆ ದಶಕಗಳ ಹಿಂದೆ ಹುಟ್ಟಿಕೊಂಡ ಈ ಸಂಘಟನೆಯು ಈಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಹದಿನಾರು ಸಂವತ್ಸರಗಳನ್ನು ಪೂರೈಸಿದ್ದು ಹದಿನಾರರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಇದಾಗಲೇ ರೂಪು,ರೇಷೆಗಳನ್ನು ಹಾಕಿಕೊಂಡಿದೆ.

ಇದೇ ಡಿಸೆಂಬರ್ ತಿಂಗಳ 16ರ ಸೋಮವಾರ ಸಂಜೆ 5 ಘಂಟೆಗೆ ತಾಯಿನಾಡಿನ ಸಂಸ್ಕ್ರತಿಯ ಸೊಬಗನ್ನು ಸವಿಯುವ ಸಾಂಸ್ಕ್ರತಿಕ ಹಬ್ಬ “ತುಳುವ ಸಂಭ್ರಮ ” ಎನ್ನುವ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಇಲ್ಲಿನ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ . ನಾಡಿನ ಜನಪ್ರಿಯ ಕಲಾವಿದರುಗಳು , ಬಿಲ್ಲವ ಸಮುದಾಯದ ಸಾಧಕರುಗಳು ಮಾತ್ರವಲ್ಲದೆ ವಿವಿಧ ಕೊಲ್ಲಿ ರಾಷ್ಟ್ರಗಳ ಬಿಲ್ಲವ ಸಂಘಟನೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಏರ್ ಇಂಡಿಯಾ ಸಂಸ್ಥೆಯ ವಿಮಾನ ನಿಲ್ದಾಣ ದ ಪ್ರಬಂಧಕರಾದ ಶ್ರೀ ಅರುಣ್ ಕುಮಾರ್ ,ಖ್ಯಾತ ತುಳು ಜಾನಪದ ಸಾಹಿತಿ ಶ್ರೀ ಉಗ್ಗಪ್ಪ ಪೂಜಾರಿ,ಶ್ರೀ ಗುರು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾದ ಶೈಲೇಂದ್ರ .ವೈ. ಸುವರ್ಣ , ಶ್ರೀ ಗುರು ಚಾರಿಟೇಬಲ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಜಯಾನಂದ್ ಮುಗ್ಗ ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ .

ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿ ತುಳು ರಂಗಭೂಮಿ ಹಾಗು ಚಲನಚಿತ್ರ ರಂಗದಲ್ಲಿ ತಮ್ಮ ಅದ್ಭುತ ಅಭಿನಯದಿಂದ ತುಳುನಾಡಿನ ಮನೆಮಾತಾಗಿರುವ ಮೇರು ಕಲಾವಿದರುಗಳಾದಂತಹ ಶ್ರೀ ನವೀನ.ಡಿ .ಪಡೀಲ್ ,ಶ್ರೀ ಭೋಜರಾಜ್ ವಾಮಂಜೂರ್,ಶ್ರೀ ಅರವಿಂದ್ ಬೋಳಾರ್ ಹಾಗು ಶ್ರೀ ಶೋಭರಾಜ್ ಪಾವೂರು ಇವರುಗಳು ಸಮಾರಂಭದಲ್ಲಿ ಪಾಲ್ಗೊಂಡು ‘ಆಲಿಬಾಬ ವರ್ಸಸ್ ಗೋಲಿಬಾಬ ” ಎನ್ನುವ ವಿನೂತನ ಶೈಲಿಯ ಹಾಸ್ಯ ಕಾರ್ಯಕ್ರಮವನ್ನು ಪ್ರದರ್ಶಿಸಲಿರುವರು.

ತುಳು ರಂಗಭೂಮಿ ಹಾಗು ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀ ಗುರು ಬಾಯಾರ್ ರವರು ಇದಕ್ಕೆ ಸಂಗೀತ ನೀಡಲಿದ್ದಾರೆ . ಬಿಲ್ಲವ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ವೈವಿಧ್ಯಮಯವಾದ ನ್ರತ್ಯ ರೂಪಕಗಳು,ನ್ರತ್ಯ ಪ್ರದರ್ಶನಗಳು ರಂಗದಲ್ಲಿ ಮೂಡಿಬರಲಿದೆ . ಬಿಲ್ಲವ ಸಮುದಾಯದ ವಿಶೇಷ ಸಾಧಕರುಗಳನ್ನು ಸಮ್ಮಾನಿಸುವ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಈ ಸಂಧರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ .

ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಶ್ರೀ ಸುರೇಂದ್ರ ಉದ್ಯಾವರ್ ರವರು ಬಹರೇನ್ ಬಿಲ್ಲವಾಸ್ ನ ಸಾರಥ್ಯವನ್ನು ವಹಿಸಿಕೊಂಡಿದ್ದು ಇವರ ಮುಂದಾಳತ್ವದಲ್ಲಿ ಈಗಾಗಲೇ ಕಾರ್ಯಕ್ರಮದ ಪೂರ್ವ ಸಿದ್ಧತೆ ನಡೆಯುತ್ತಿದೆ . ಈ ಸಾಂಸ್ಕ್ರತಿಕ ಕಾರ್ಯಕ್ರಮವು ದ್ವೀಪದ ಬಿಲ್ಲವ ಸಮುದಾಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದು ಮಾತ್ರವಲ್ಲದೆ ನಾಡಿನ ಖ್ಯಾತ ಕಲಾವಿದರು ಎಲ್ಲರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ವರ್ಣರಂಜಿತ “ತುಳುವ ಸಂಭ್ರಮ ” ಕಾರ್ಯಕ್ರಮಕ್ಕೆ ಪ್ರವೇಶ ಮುಕ್ತವಾಗಿದ್ದು ದ್ವೀಪದ ತುಳು,ಕನ್ನಡ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶ್ರೀ ಸುರೇಂದ್ರ ಉದ್ಯಾವರ್ ರವರು ಕರೆ ನೀಡಿದ್ದಾರೆ.

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಶ್ರೀ ಶ್ರೀ ಸುರೇಂದ್ರ ಉದ್ಯಾವರ್ ರವರನ್ನು ದೂರವಾಣಿ ಸಂಖ್ಯೆ 39582392 ಸಂಪರ್ಕಿಸಬಹುದು .

ವರದಿ- ಕಮಲಾಕ್ಷ ಅಮೀನ್

Comments are closed.